ADVERTISEMENT

ಕಂದಾಯ ಸಹಾಯವಾಣಿ: ವಾರಕ್ಕೆ 3 ಸಾವಿರ ಕರೆ

2 ತಿಂಗಳಲ್ಲಿ 34 ಸಾವಿರ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:54 IST
Last Updated 22 ಆಗಸ್ಟ್ 2022, 19:54 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಕಂದಾಯ ಇಲಾಖೆ ಆರಂಭಿಸಿರುವ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿಗೆ ವಾರಕ್ಕೆ ಸರಾಸರಿ 3,000ಕ್ಕೂ ಹೆಚ್ಚು ಕರೆಗಳ ಮೂಲಕ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಈವರೆಗೆ ಸುಮಾರು 34,020 (ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳು) ಅರ್ಜಿಗಳು ಸಲ್ಲಿಕೆಯಾಗಿವೆ.

ಅರ್ಜಿ ಸಲ್ಲಿಕೆಯಾದ 72 ಗಂಟೆಗಳಲ್ಲಿ ಅರ್ಹರಿಗೆ ಪಿಂಚಣಿಯ ಒದಗಿಸುವ ಮಂಜೂರಾತಿ ಆದೇಶಗಳನ್ನು ನೀಡುವ ಯೋಜನೆ ಇದಾಗಿದೆ.ಮಧ್ಯವರ್ತಿಗಳ ಹಾವಳಿ, ಕಂದಾಯ ಅಧಿಕಾರಿಗಳು ಮತ್ತು ಗ್ರಾಮಲೆಕ್ಕಿಗರಿಂದ ಆಗುತ್ತಿದ್ದ ವಿಳಂಬ ಮತ್ತು ಭ್ರಷ್ಟಾಚಾರಕ್ಕೂ ಕಡಿ ವಾಣ ಬಿದ್ದಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿ
ಯೊಬ್ಬರು ತಿಳಿಸಿದ್ದಾರೆ.

ಈವರೆಗೆ ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳಲ್ಲಿ ಪೈಕಿ 26,751 ಅರ್ಜಿಗಳಿಗೆ ಆದೇಶ ಆಗಿದೆ. 6,454 ಅರ್ಜಿಗಳು ತಿರಸ್ಕೃತವಾಗಿದ್ದು, 815 ಇತ್ಯರ್ಥವಾಗಬೇಕಾಗಿದೆ ಎಂದು ಅವರು ಹೇಳಿದರು.

ADVERTISEMENT

ಸಾರ್ವಜನಿಕರು ಟೋಲ್‌ಫ್ರೀ ಸಂಖ್ಯೆ 155245 ಗೆ ಕರೆ ಮಾಡಿದರೆ ಸಹಾಯವಾಣಿ ಕೇಂದ್ರದಲ್ಲಿರುವ ಸಿಬ್ಬಂದಿ, ಕರೆ ಮಾಡಿದವರ ಆಧಾರ್‌ ಸಂಖ್ಯೆ, ವಿಳಾಸ, ವಯಸ್ಸು, ಯಾವ ವಿಭಾಗದಡಿ ಸಾಮಾಜಿಕ ಪಿಂಚಣಿ ಕೋರುತ್ತಿದ್ದಾರೆ ಎಂಬ ಮಾಹಿತಿಯನ್ನು ಪಡೆಯುತ್ತಾರೆ. ಅದನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಂತೆ ಮಾಹಿತಿ ಸಮೇತ ಅರ್ಜಿಯು ಸಂಬಂಧಿಸಿದ ಗ್ರಾಮಲೆಕ್ಕಿಗರ ಮೊಬೈಲ್‌ ಸಂಖ್ಯೆಗೆ ರವಾನೆಯಾಗುತ್ತದೆ. ಗ್ರಾಮಲೆಕ್ಕಿಗರು ಅರ್ಜಿದಾರರ ಮನೆಗೆ ತೆರಳಿ ಅಗತ್ಯ ದಾಖಲೆ ಪಡೆದು, ಅರ್ಹತೆ ಇರುವವರಿಗೆ ಮೂರು ದಿನಗಳಲ್ಲಿ ಅದೇಶದ ಪ್ರತಿ ನೀಡಲಾಗುತ್ತದೆ ಎಂದು ವಿವರಿಸಿದರು.

‘ಸಾಮಾಜಿಕ ಪಿಂಚಣಿ ಪಡೆಯಲು ಸಾಮಾನ್ಯ ಜನ ಕಷ್ಟಪಡುತ್ತಿದ್ದು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗಮನಕ್ಕೆ ಬಂದಿತು. ಬಡ– ಹಿರಿಯ ನಾಗರಿಕರು ನೆಮ್ಮದಿಯಿಂದ ಇರಬೇಕು. ಸಚಿವರು, ಶಾಸಕರ ಮುಂದೆ ಹಿರಿಯ ನಾಗರಿಕರು ದಾರಿ ಮಧ್ಯೆ ಪಿಂಚಣಿಗಾಗಿ ಅರ್ಜಿ ಹಿಡಿದು ನಿಲ್ಲುವುದನ್ನು ತಪ್ಪಿಸಿದ್ದೇವೆ. ಒಟ್ಟು 75.50 ಲಕ್ಷ ಮಂದಿ ವಿವಿಧ ಪಿಂಚಣಿ ಪಡೆಯುತ್ತಿದ್ದು, 2022–23 ನೇ ಸಾಲಿನಲ್ಲಿ 2.02 ಲಕ್ಷ ಹೊಸ ಫಲಾನುಭವಿಗಳು ಸೇರ್ಪಡೆಯಾಗಿ
ದ್ದಾರೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.