ADVERTISEMENT

ಸಚಿವರ ಕಾರ್ಯಕ್ಷಮತೆ ಪರಾಮರ್ಶೆಗೆ ಚಿಂತನೆ

ಕೊರೊನಾ ಸಂಕಷ್ಟ ಮುಗಿದ ತಕ್ಷಣ ಸಚಿವರಿಗೆ ‘ಪರೀಕ್ಷೆ’

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:01 IST
Last Updated 25 ಮೇ 2020, 20:01 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ವರ್ಷ ತುಂಬಲು ಇನ್ನೆರಡೇ ತಿಂಗಳು (ಜುಲೈ 26) ಬಾಕಿ ಇದ್ದು, ಅದಕ್ಕೆ ಮೊದಲೇ ಎಲ್ಲ ಸಚಿವರ ಕಾರ್ಯಕ್ಷಮತೆ ಪರಾಮರ್ಶೆ ನಡೆಸಬೇಕು ಎಂಬ ಚಿಂತನೆ ಪಕ್ಷದಲ್ಲಿ ಆರಂಭವಾಗಿದೆ.

ಸಚಿವರ ಕಾರ್ಯ ಕ್ಷಮತೆ ಮತ್ತು ದಕ್ಷತೆ ಆಧಾರದ ಮೇಲೆ ಖಾತೆಗಳನ್ನು ಅದಲು ಬದಲು ಮಾಡಿ, ಶ್ರಮ ವಹಿಸಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ಮೂಲಕ ಸರ್ಕಾರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.

‘ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರು ಮೈಮರೆಯಲಿಲ್ಲ. ಆ ವೇಳೆಗೆ ರಾಜ್ಯದ ಬಹುತೇಕ ಪ್ರದೇಶ ಭಾರಿ ಪ್ರವಾಹಕ್ಕೆ ತುತ್ತಾಗಿತ್ತು. ಭೂಕುಸಿತದಿಂದ ಸಾಕಷ್ಟು ಪ್ರಾಣ, ಆಸ್ತಿ– ಪಾಸ್ತಿ ಹಾನಿಯಾಗಿತ್ತು. ಏಕಾಂಗಿಯಾಗಿ ತಿಂಗಳು ಕಾಲ ರಾಜ್ಯದ್ಯಂತ ಓಡಾಡಿ, ನೊಂದವರ ಕಣ್ಣೀರು ಒರೆಸುವ ಕೆಲಸಕ್ಕೆ ಕೈಹಾಕಿದರು. ಆಗ ಸಂಪುಟ ವಿಸ್ತರಣೆ ಆಗಿರಲಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ADVERTISEMENT

ಸಂಪುಟ ವಿಸ್ತರಣೆಗೆ ಸಾಕಷ್ಟು ಸಮಯವನ್ನೇ ತೆಗೆದುಕೊಂಡು ಅಳೆದು ಸುರಿದು, ಪಕ್ಷದ ವರಿಷ್ಠರ ಅನುಮತಿ ಪಡೆದು ಕೊನೆ ಗಳಿಗೆಯಲ್ಲಿ ಕೆಲವು ಹೆಸರುಗಳನ್ನು ಬದಲಿಸಿ ಮೊದಲ ಹಂತದ ಸಚಿವ ಸಂಪುಟ ವಿಸ್ತರಿಸಲಾಯಿತು. ಎರಡನೇ ಹಂತದಲ್ಲಿ ಸಂಪುಟ ವಿಸ್ತರಿಸುವುದಕ್ಕೆ ಮುನ್ನ ಕಾಂಗ್ರೆಸ್‌–ಜೆಡಿಎಸ್‌ ಬಿಟ್ಟು ಬಂದವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಬೇಕಿತ್ತು. ಆ ಕಾರ್ಯವನ್ನು ಯಡಿಯೂರಪ್ಪ ಯಶಸ್ವಿಯಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಸಚಿವರಾದವರಲ್ಲಿ ಬೆರಳೆಣಿಕೆಯಷ್ಟು ಜನರನ್ನು ಬಿಟ್ಟು ಉಳಿದವರು ಪಕ್ಷ ಮತ್ತು ನಾಯಕತ್ವದ ಅಪೇಕ್ಷೆಗೆ ತಕ್ಕಂತೆ, ಕೆಲಸ ಮಾಡುತ್ತಿಲ್ಲ. ಉದಾಸೀನತೆಯ ಕೆಲಸದಿಂದ ರಾಜ್ಯದ ಅಭಿವೃದ್ಧಿಗೆ ವೇಗ ಸಿಗುವುದು ಕಷ್ಟ. ಈಗ ಕೊರೊನಾದಿಂದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಂಡಿವೆ. ಈ ಸಂಕಷ್ಟದ ಅವಧಿಯಲ್ಲೂ ಮುಖ್ಯಮಂತ್ರಿಯವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ ಸಚಿವರು ಅತಿ ಕಡಿಮೆ ಎಂದು ಅವರು ತಿಳಿಸಿದರು.

ಲಾಕ್‌ಡೌನ್‌ ಆರಂಭದ ದಿನದಿಂದ ಇಲ್ಲಿಯವರೆಗೆ ಕೆಲವು ಸಚಿವರು ತಮ್ಮ ಇಲಾಖೆಗಳ ಬಗ್ಗೆಯೂ ಸಕಾರಾತ್ಮಕ ಯೋಜನೆಗಳನ್ನು ರೂಪಿಸಿಕೊಳ್ಳದೇ ಸುಮ್ಮನೇ ಉಳಿದಿದ್ದಾರೆ. ಅಂತಹವರ ಪಟ್ಟಿ ಮಾಡಿ, ಚುರುಕು ಮುಟ್ಟಿಸುವ ಕೆಲಸ ಮಾಡಲಾಗುವುದು. ಕೆಲವರ ಖಾತೆಗಳನ್ನೂ ಬದಲಾಯಿಸುವ ಕುರಿತೂ ಚಿಂತನೆ ನಡೆದಿದೆ ಎಂದರು.

ಮೇಲ್ಮನೆಗೆ ಸುರಾನ, ತಾರಾ, ಶ್ರುತಿ ಪೈಪೋಟಿ

ಜೂನ್‌ನಲ್ಲಿ ವಿಧಾನಪರಿಷತ್ತಿನ ಒಟ್ಟು 16 ಸ್ಥಾನಗಳು ತೆರವಾಗಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ನಾಮಕರಣ ಮಾಡುವ ಐದು ಸ್ಥಾನಗಳಿಗೆ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ. ನಿರ್ಮಲ್‌ ಕುಮಾರ್‌ ಸುರಾನ, ನಟಿಯರಾದ ತಾರಾ, ಶ್ರುತಿ, ಮಾಳವಿಕಾ ಮತ್ತು ಮಹಿಳಾ ಮೋರ್ಚಾದ ಭಾರತಿ ಶೆಟ್ಟಿ ಮುಂತಾದವರು ಪ್ರಯತ್ನ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಆದರೆ, ಈವರೆಗೂ ಅವಕಾಶ ಸಿಗದವರಿಗೆ ಮಣೆ ಹಾಕಲು ಆರ್‌ಎಸ್‌ಎಸ್‌ ಉದ್ದೇಶಿಸಿದ್ದು, ಹೊಸಬರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ.

ನಿರ್ಮಲ್‌ ಕುಮಾರ್ ಸುರಾನ ಅವರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರ ‘ಅಭಯ’ ಇರುವುದರಿಂದ ಅವರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.