ADVERTISEMENT

ಸೆಪ್ಟೆಂಬರ್ ನಂತರ ಕ್ರಾಂತಿ: ಸಚಿವ ಕೆ.ಎನ್‌. ರಾಜಣ್ಣ

ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಭವಿಷ್ಯ ನುಡಿದ ಸಚಿವ ಕೆ.ಎನ್‌. ರಾಜಣ್ಣ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:35 IST
Last Updated 26 ಜೂನ್ 2025, 16:35 IST
ಕೆ.ಎನ್‌.ರಾಜಣ್ಣ
ಕೆ.ಎನ್‌.ರಾಜಣ್ಣ   

ಬೆಂಗಳೂರು: ‘ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ನಂತರ ಕ್ರಾಂತಿ ಆಗಲಿದೆ. ಅದು ಪಕ್ಷದ ವಿಚಾರದಲ್ಲಿಯೊ, ಸರ್ಕಾರದ ವಿಚಾರದಲ್ಲಿಯೊ ಎಂಬುದನ್ನು ಕಾದು ನೋಡಿ’ ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಕಾಂಗ್ರೆಸ್‌ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಮೇ ಕ್ರಾಂತಿ, ಆಗಸ್ಟ್‌ ಕ್ರಾಂತಿ ಎಂದೆಲ್ಲ ಕೇಳಿಲ್ಲವೇ? ಅದೇ ರೀತಿ ಇದು ಸೆಪ್ಟೆಂಬರ್ ಕ್ರಾಂತಿ. ಏನಾಗಲಿದೆ ಎಂಬುದನ್ನು ಈಗಲೇ ಹೇಳಿದರೆ ಆಸಕ್ತಿ ಹೋಗಿಬಿಡುತ್ತದೆ. ಏನು ಬೇಕಿದ್ದರೂ ಊಹೆ ಮಾಡಿಕೊಳ್ಳಿ’ ಎಂದರು.

‘ರಾಜಕಾರಣ ಎಂದೂ ನಿಂತ ನೀರಲ್ಲ. ಹರಿಯುವ ನೀರು. ಅದು ಎತ್ತರಕ್ಕೆ ಏರಲ್ಲ. ಹಳ್ಳ ಇದ್ದ ಕಡೆಗೆ ಹರಿಯುತ್ತದೆ. ಯಾವ‍್ಯಾವ ಘಟನಾವಳಿಗಳು ಯಾವ್ಯಾವ ಸಂದರ್ಭದಲ್ಲಿ ಆಗುತ್ತವೆಯೋ ಅದನ್ನು ಆಧರಿಸಿ ಮುಂದಿನ ಕಾರ್ಯಚಟುವಟಿಕೆಗಳು ರಾಜಕಾರಣದಲ್ಲಿ ನಡೆಯುತ್ತವೆ’ ಎಂದರು.

ADVERTISEMENT

‘ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ನಾಯಕರಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನೂ ಭೇಟಿ ಮಾಡಿ ರಾಜ್ಯ ರಾಜಕೀಯ ಚಟುವಟಿಕೆಯ ಕುರಿತು ಚರ್ಚಿಸಿದ್ದಾರೆ. ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಇರುವ ಕಾರಣ ಸದ್ಯಕ್ಕೆ ಇದಕ್ಕೆಲ್ಲ ಮಹತ್ವ ಕೊಡುವ ಅಗತ್ಯವಿಲ್ಲ. ಅವರು ಬಂದ ನಂತರ ಕೆಲವು ರಾಜಕೀಯ ಬದಲಾವಣೆಯ ತೀರ್ಮಾನ ಆಗುತ್ತದೆ ಎಂದು ನಾನು ನಿರೀಕ್ಷೆ ಮಾಡಿದ್ದೇನೆ’ ಎಂದು ಹೇಳಿದರು.

‘ಪವರ್ ಸೆಂಟರ್‌’ಗಳು ಜಾಸ್ತಿ ಆಗಿವೆ: ‘ಕಾಂಗ್ರೆಸ್‌ನಲ್ಲಿ ಪವರ್ ಸೆಂಟರ್‌ಗಳು ಜಾಸ್ತಿ ಆಗಿವೆ. 2013-2018ರಲ್ಲಿ ಪವರ್ ಸೆಂಟರ್ ಒಂದೇ ಇದ್ದದ್ದು. ಈಗ ಎರಡು-ಮೂರು ಎಷ್ಟು ಬೇಕಿದ್ದರೂ ಹೇಳಿಕೊಳ್ಳಬಹುದು. ಪವರ್ ಸೆಂಟರ್ ಜಾಸ್ತಿ ಇದ್ದಾಗ ಜಂಜಾಟವೂ ಜಾಸ್ತಿ ಆಗುತ್ತದೆ. ಅದಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವನ್ನು ನಡೆಸಬೇಕಾಗುತ್ತದೆ. 2013-18ರ ಸಿದ್ದರಾಮಯ್ಯ ಈಗ ಇಲ್ಲ ಎಂಬುದು ಜನರ ಅಭಿಪ್ರಾಯ. ಪವರ್ ಸೆಂಟರ್ ಬಹಳಷ್ಟು ಇರುವುದರಿಂದಲೇ ಹೀಗಾಗಿರುವುದು’ ಎಂದರು.

‘ತಿಂಗಳಲ್ಲಿ 15-20 ದಿನ ಬೇರೆ ಜಿಲ್ಲೆಗಳಿಗೆ ಹೋಗಿ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಯವರು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಅನುದಾನ ಇಲ್ಲದಿದ್ದರೆ ಇದನ್ನೆಲ್ಲ ಮಾಡಲಾಗುತ್ತದೆಯೇ? ನಿರೀಕ್ಷೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲ ಎನ್ನುವುದು ಬಹಳ ಶಾಸಕರು, ಕಾರ್ಯಕರ್ತರ ಭಾವನೆ ಇರಬಹುದು. ಗ್ಯಾರಂಟಿಗಳು ಸೇರಿ ಮತ್ತಿತರ ಯೋಜನೆಗಳ ಜಾರಿ ಸಂದರ್ಭದಲ್ಲಿ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಿದೆ. ಆದರೂ ಆಡಳಿತ- ವಿರೋಧ ಪಕ್ಷ ಎಂಬ ತಾರತಮ್ಯ ಇಲ್ಲದೆ ಅನುದಾನ ಒದಗಿಸಲಾಗುತ್ತಿದೆ. ಏನೂ ಕೊಡುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು’ ಎಂದು ಪ್ರತಿಕ್ರಿಯಿಸಿದರು.

ನಮ್ಮದು ಹೈಕಮಾಂಡ್ ಇರುವ ಪಕ್ಷ. ನಾಳೆಯೇ ನಿರ್ಧಾರ ತೆಗೆದುಕೊಳ್ಳಬಹುದು. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ನಾನಿರಲಿ ರಾಜಣ್ಣ ಇರಲಿ ಮತ್ತೊಬ್ಬ ಇರಲಿ ಬಿ.ಝೆಡ್‌. ಜಮೀರ್‌ ಅಹಮದ್‌ ಖಾನ್ ವಸತಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.