ADVERTISEMENT

ದಾವಣಗೆರೆಯಲ್ಲಿ ವಿಜಯೇಂದ್ರ ನಿಷ್ಠರ ಸಮಾವೇಶ

ಯತ್ನಾಳರದ್ದು ಸಿದ್ದರಾಮಯ್ಯ ಮೋರ್ಚಾ: ರೇಣುಕಾಚಾರ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 15:41 IST
Last Updated 27 ನವೆಂಬರ್ 2024, 15:41 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಿಷ್ಠರ ಬಣ ಸದ್ಯವೇ ದಾವಣಗೆರೆಯಲ್ಲಿ ಬೃಹತ್‌ ಸಮಾವೇಶವೊಂದನ್ನು ನಡೆಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ತಂಡದ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಲು ತೀರ್ಮಾನಿಸಿದೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಬುಧವಾರ ನಡೆದ ಸಭೆಯಲ್ಲಿ, ಯತ್ನಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಡಿಯಾಳಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ಡಿ.ಲಕ್ಷ್ಮಿನಾರಾಯಣ ಭಾಗವಹಿಸಿದ್ದರು.

ADVERTISEMENT

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಈ ಸಮಾವೇಶ ಯಾವುದೇ ವ್ಯಕ್ತಿ ಅಥವಾ ಬಣದ ಪರವಾಗಿ ನಡೆಸುತ್ತಿಲ್ಲ. ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಹೊಸ ಹುರುಪು ತುಂಬಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದಾಗಿದೆ ಎಂದು ಹೇಳಿದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಮತ್ತಿತರರು ಪಕ್ಷದ ಅಧ್ಯಕ್ಷರ ಅನುಮತಿಯನ್ನು ಪಡೆಯದೇ ಚಿಹ್ನೆಯನ್ನು ಬಳಸದೇ ನಡೆಸುತ್ತಿರುವ ಜನಜಾಗೃತಿ ಅಭಿಯಾನಕ್ಕೆ ಕಾರ್ಯಕರ್ತರ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ತಕ್ಷಣವೇ ವರಿಷ್ಠರು ಮಧ್ಯಪ್ರವೇಶಿಸಿ ಅಭಿಯಾನ ನಡೆಸದಂತೆ ಸ್ಪಷ್ಟ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

‘ಕೆಲವರು ಪಕ್ಷಕ್ಕಿಂತ ನಾನೇ ದೊಡ್ಡವನೆಂದು ಬಿಂಬಿಸಿಕೊಂಡು ನಾಲ್ಕಾರು ಜನರ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಇದರಲ್ಲಿ ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಹೆಚ್ಚಾಗಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು, ಈಗ ಪಾದಯಾತ್ರೆ ನಡೆಸುತ್ತಿರುವವರಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರ ಸಂಪೂರ್ಣ ಬೆಂಬಲದಿಂದ ಅಧ್ಯಕ್ಷರಾಗಿದ್ದಾರೆ . ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಟೀಕಿಸಿದರೆ ಮೋದಿ– ಅಮಿತ್‌ ಷಾ ಅವರನ್ನು ಟೀಕಿಸಿದಂತೆ’ ಎಂದು ಹೇಳಿದರು.

‘ಯತ್ನಾಳ  ಹೋರಾಟ ಕಾಂಗ್ರೆಸ್‌ ಪಕ್ಷದ ವಿರುದ್ಧ ಇರಬೇಕಿತ್ತು. ಆದರೆ ಸಿದ್ದರಾಮಯ್ಯ ಅವರು ಅಣತಿಯಂತೆ ನಡೆಯುತ್ತಿದ್ದಾರೆ. ಅಲ್ಲದೆ, ತಮ್ಮ ಬಣದವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುವುದಕ್ಕೆ ಯತ್ನಾಳ ಅವರಿಗೆ ಅಧಿಕಾರ ಇದೆಯೇ? ಯಡಿಯೂರಪ್ಪ ಅವರಿಗೂ ಆ ಅಧಿಕಾರವಿಲ್ಲ. ಗೊಂದಲಗಳ ಬಗ್ಗೆ ಕಾರ್ಯಕರ್ತರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಉತ್ತರ ಹೇಳುವ ಜವಾಬ್ದಾರಿ ನಮ್ಮದು’ ಎಂದು ರೇಣುಕಾಚಾರ್ಯ ತಿಳಿಸಿದರು.

‘ಯತ್ನಾಳ ಅವರು ನಡೆಸುತ್ತಿರುವ ಹೋರಾಟ ಸಿದ್ದರಾಮಯ್ಯ ಮೋರ್ಚಾ ಎಂದು ಎಚ್‌.ವಿಶ್ವನಾಥ್‌ ಅವರು ವ್ಯಾಖ್ಯಾನಿಸಿರುವುದು ಸರಿಯಾಗಿಯೇ ಇದೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.