ADVERTISEMENT

ನದಿ ಪಥವೇ ಬದಲಾಯಿತು

ಗದ್ದೆಗಳ ತುಂಬ ತುಂಬಿದೆ ಮಣ್ಣು, ಕಲ್ಲಿನ ರಾಶಿ: ಬೆಟ್ಟದಲ್ಲಿ ಬೃಹತ್ ಕಂದಕ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 20:15 IST
Last Updated 31 ಆಗಸ್ಟ್ 2018, 20:15 IST
ಮದೆನಾಡು ಬಳಿ ಬೆಟ್ಟ ಕುಸಿದು ನದಿ ಪಥ ಬದಲಾಗಿದೆ
ಮದೆನಾಡು ಬಳಿ ಬೆಟ್ಟ ಕುಸಿದು ನದಿ ಪಥ ಬದಲಾಗಿದೆ   

ಗೋಣಿಕೊಪ್ಪಲು: ಕೊಡಗಿನಲ್ಲಿ ಬೆಟ್ಟಗುಡ್ಡಗಳ ಕುಸಿತಕ್ಕೆ ನದಿ ಪಾತ್ರಗಳೇ ಬದಲಾಗಿವೆ. ಮದೆನಾಡು ಬಳಿ ಬೆಟ್ಟ ಕುಸಿದು ಗದ್ದೆಗಳೇ ಮಾಯವಾಗಿವೆ. ಪಯಸ್ವಿನಿ ನದಿ ಮೇಲೆ ಮಣ್ಣು ಕುಸಿದಿದ್ದು, ನದಿ ತನ್ನ ಪಥವನ್ನು ಬದಲಿಸಿದೆ.

ಮದೆನಾಡಿನಲ್ಲಿ ಪ್ರವೀಣ್ ಎಂಬುವರ ಮನೆ ಬಳಿ ಸುಮಾರು ಅರ್ಧ ಕಿ.ಮೀ.ನಷ್ಟು ಬೆಟ್ಟ ಕುಸಿದಿದೆ. 300 ಅಡಿಗಳಷ್ಟು ಆಳದ ಗದ್ದೆಗೆ 500 ಮೀಟರ್‌ನಷ್ಟು ವಿಸ್ತೀರ್ಣದಲ್ಲಿ ಮಣ್ಣು ಬಿದ್ದಿದೆ. ಗದ್ದೆಯ ಒಂದು ಬದಿಯಲ್ಲಿ ಶತಮಾನಗಳಿಂದ ಹರಿಯುತ್ತಿದ್ದ ಪಯಸ್ವಿನಿ ನದಿ ತನ್ನ ದಿಕ್ಕನ್ನೇ ಬದಲಿಸಿಕೊಂಡು ಮನೆಗಳಿದ್ದ ಜಾಗವನ್ನೇ ತನ್ನ ಹರಿವಿಗೆ ದಾರಿ ಮಾಡಿಕೊಂಡಿದೆ.

ಜೀವನೋಪಾಯಕ್ಕೆ ಆಧಾರವಾಗಿದ್ದ ಭತ್ತದ ಗದ್ದೆ ಕಲ್ಲು, ಮಣ್ಣಿನಿಂದ ಮುಚ್ಚಿಕೊಂಡಿದೆ. ಕುಸಿದಿರುವ ಬೆಟ್ಟದಲ್ಲಿ ಬೃಹತ್ ಕಂದಕ ಸೃಷ್ಟಿಯಾಗಿದೆ. ಗದ್ದೆಗಳ ಆಸುಪಾಸಿನಲ್ಲಿದ್ದ ಮನೆಗಳ ದಡಗಳೂ ಕುಸಿದಿದ್ದು, ಮನೆಗಳು ಯಾವಾಗ ಬಿದ್ದು ಹೋಗುತ್ತವೊ ಎಂಬ ಆತಂಕ ಎದುರಾಗಿದೆ.

ADVERTISEMENT

ಮಂಗಳೂರು ಹೆದ್ದಾರಿಯಲ್ಲಿದ್ದ ರಿವರ್ ರಾಕ್ ಎಂಬ ರೆಸಾರ್ಟ್ ಕೂಡ ನದಿಯಲ್ಲಿ ಕೊಚ್ಚಿ ಹೋಗಿದೆ. ಸುಮಾರು 200 ಮೀಟರ್ ದೂರದಲ್ಲಿ ಹರಿಯುತ್ತಿದ್ದ ಪಯಸ್ವಿನಿ ನದಿ ಈಗ ರೆಸಾರ್ಟ್ ಮನೆಯೊಂದರ ಮಧ್ಯಭಾಗದಲ್ಲಿ ಹರಿಯುತ್ತಿದೆ. ರೆಸಾರ್ಟ್ ಮುಂದೆ ನಿಲ್ಲಿಸಿದ್ದ ಜೀಪ್, ಮಿನಿ ಲಾರಿ, ಕಾರು ಮಣ್ಣುಪಾಲಾಗಿವೆ. ಅವುಗಳ ಮೇಲೆ ಮರ, ಮಣ್ಣು ತುಂಬಿಕೊಂಡಿದ್ದು, ಸಂಪೂರ್ಣ ಮರೆಯಾಗಿವೆ.

ಮದೆನಾಡು ಭಾಗದ ಯಾವ ಗದ್ದೆಗಳಲ್ಲಿಯೂ ಹಸಿರಿಲ್ಲ. ಕೆಂಬಣ್ಣದ ಮಣ್ಣು ತುಂಬಿದೆ. ರೈತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.