ADVERTISEMENT

ರಸ್ತೆ ಮಧ್ಯದಲ್ಲಿದೆ ವಿದ್ಯುತ್‌ ಕಂಬ

ಸ್ಥಳಾಂತರ ವಿಳಂಬ, ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 13:55 IST
Last Updated 13 ಸೆಪ್ಟೆಂಬರ್ 2021, 13:55 IST
ಚಿತ್ರದುರ್ಗದ ತುರುವನೂರು ರಸ್ತೆಯ ಮಧ್ಯಭಾಗದಲ್ಲಿರುವ ವಿದ್ಯುತ್‌ ಕಂಬವನ್ನು ತೆರವುಗೊಳಿಸದೇ ಕಾಮಗಾರಿ ಪೂರ್ಣಗೊಳಿಸಿರುವುದು.
ಚಿತ್ರದುರ್ಗದ ತುರುವನೂರು ರಸ್ತೆಯ ಮಧ್ಯಭಾಗದಲ್ಲಿರುವ ವಿದ್ಯುತ್‌ ಕಂಬವನ್ನು ತೆರವುಗೊಳಿಸದೇ ಕಾಮಗಾರಿ ಪೂರ್ಣಗೊಳಿಸಿರುವುದು.   

ಚಿತ್ರದುರ್ಗ: ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮಧ್ಯಭಾಗಕ್ಕೆ ಬಂದ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಕಾಂಕ್ರಿಟ್‌ ಕಾಮಗಾರಿಯನ್ನು ಗುತ್ತಿಗೆದಾರ ಪೂರ್ಣಗೊಳಿಸಿದ್ದಾರೆ. ಇದರ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಇಂತಹದೊಂದು ಲೋಪ ಕಂಡುಬಂದಿದೆ. ರಸ್ತೆಯ ಮಧ್ಯಭಾಗದ ವಿದ್ಯುತ್ ಕಂಬಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ.

ತುರುವನೂರು ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ₹ 7 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ 10.5 ಮೀಟರ್‌ ವಿಸ್ತರಣೆ ಮಾಡಲಾಗುತ್ತಿದೆ. ವಿದ್ಯುತ್ ಕಂಬ, ಕಟ್ಟಡಗಳನ್ನು ತೆರವುಗೊಳಿಸದೇ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ADVERTISEMENT

ಬಿ.ಎಲ್‌.ಗೌಡ ಬಡಾವಣೆಯ ವಿಷ್ಣುವರ್ಧನ್‌ ಉದ್ಯಾನದ ಸಮೀಪ ಕೆಲ ವಿದ್ಯುತ್‌ ಕಂಬಗಳು ರಸ್ತೆಯ ಮಧ್ಯಭಾಗದಲ್ಲಿವೆ. ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗ ಈ ಕಂಬಗಳನ್ನು ಸ್ಥಳಾಂತರ ಮಾಡಬೇಕಿತ್ತು. ಈ ಕಾರ್ಯ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದರಿಂದ ಕುಪಿತಗೊಂಡ ಗುತ್ತಿಗೆದಾರ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿದ್ದಾರೆ.

ರಸ್ತೆ ವಿಸ್ತರಣೆಯ ಉದ್ದೇಶಕ್ಕೆ ಈ ಮಾರ್ಗದಲ್ಲಿ ಈಗಾಗಲೇ 108 ಮರಗಳನ್ನು ಹನನ ಮಾಡಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಕಾಂಪೌಂಡ್‌ ಕೂಡ ತೆರವುಗೊಳಿಸಲಾಗಿದೆ. ಕೆಲ ಖಾಸಗಿ ಕಟ್ಟಡಗಳ ತೆರವು ಕಾರ್ಯ ಸಕಾಲಕ್ಕೆ ಪೂರ್ಣಗೊಳ್ಳುತ್ತಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣದ ನೆಪ ಹೇಳಿಕೊಂಡು ಮೊದಲಿದ್ದಷ್ಟೇ ರಸ್ತೆಗೆ ಕಾಂಕ್ರಿಟ್‌ ಹಾಕಲಾಗುತ್ತಿದೆ.

‘ಭೀಮ್‌ ಆರ್ಮಿ’ ಸಂಘಟನೆಯ ಮುಖಂಡ ಅವಿನಾಶ್‌ ಎಂಬುವರು ಈ ಅವ್ಯವಸ್ಥೆಯ ಪರಿಯನ್ನು ಫೇಸ್‌ಬುಕ್‌ ಲೈವ್‌ ಮಾಡಿದ್ದರು. ಸಾರ್ವಜನಿಕರ ತೆರಿಗೆ ಹಣ ಲೋಪವಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ರಸ್ತೆ ವಿಸ್ತರಣೆಗೆ ಸರ್ಕಾರ ಅನುಮತಿ ನೀಡುವುದು ತಡವಾಯಿತು. ವಿದ್ಯುತ್‌ ಕಂಬ ತೆರವುಗೊಳಿಸುವುದಕ್ಕೆ ₹ 67 ಲಕ್ಷ ಅನುದಾನ ಮೀಸಲಿಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಆರಂಭವಾಗಿದ್ದು, ವಾರದಲ್ಲಿ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್‌ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವೀಂದ್ರ ತಿಳಿಸಿದ್ದಾರೆ.

***

ರಸ್ತೆ ಬದಿಯಲ್ಲಿ ವಿದ್ಯುತ್‌ ಮಾರ್ಗ ನಿರ್ಮಾಣ ಮಾಡುವ ಮುನ್ನ ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯಬೇಕು. ‘ಬೆಸ್ಕಾಂ’ ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ.

ರವೀಂದ್ರ, ಎಇಇ
ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.