ADVERTISEMENT

‘ರೋಹಿಣಿ ಸಿಂಧೂರಿನಾ ಮತ್ತೆ ಹಾಸನಕ್ಕೆ ಕಳಿಸ್ತೀರಾ?’

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 14:29 IST
Last Updated 20 ಜೂನ್ 2018, 14:29 IST
   

ಬೆಂಗಳೂರು: ‘ಐ.ಎ.ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಾಸನಕ್ಕೆ ಮತ್ತೆ ಜಿಲ್ಲಾಧಿಕಾರಿಯಾಗಿ ಕಳಿಸುತ್ತೀರೋ ಹೇಗೆ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.

‘ನನ್ನನ್ನು ಅವಧಿಪೂರ್ವ ವರ್ಗ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರ’ ಎಂದು ಆಕ್ಷೇಪಿಸಿ ಐ.ಎ.ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಜಿ‌.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರೋಹಿಣಿ ಪರ ವಕೀಲ ಎಂ.ನಾಗಪ್ರಸನ್ನ ಅವರು ವಾದ ಮಂಡಿಸಿ, ‘ಚುನಾವಣೆ ಉದ್ದೇಶದಿಂದ ಅರ್ಜಿದಾರರನ್ನು ವರ್ಗಾವಣೆ ಮಾಡಲಾಗಿದೆ. ಅವಧಿಪೂರ್ವ ವರ್ಗಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ವರ್ಗಾವಣೆ ಮಾಡಲಾಗಿದೆ’ ಎಂದರು.

ADVERTISEMENT

ಇದಕ್ಕೆ ಪ್ರತಿವಾದಿಯಾದ ಐ.ಎ.ಎಸ್‌.ಅಧಿಕಾರಿ ಡಿ.ರಣದೀಪ್‌ ಪರ ವಕೀಲ ಗುರುರಾಜ ಜೋಷಿ, ‘ಅರ್ಜಿದಾರರ ಪರ ವಕೀಲರ ಹೇಳಿಕೆ ಸರಿಯಲ್ಲ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಈ ಅರ್ಜಿಯನ್ನು ಈಗಲೇ ಇತ್ಯರ್ಥಗೊಳಿಸೋಣ. ಏನ್ರೀ, ಇದಕ್ಕೆ ಸರ್ಕಾರ ಏನು ಹೇಳುತ್ತದೆ’ ಎಂದು ಸರ್ಕಾರಿ ವಕೀಲ ತಾರಾನಾಥ ಪೂಜಾರಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪೂಜಾರಿ, ಸಮಯಾವಕಾಶ ಬೇಕು ಎಂದು ಮನವಿ ಮಾಡಿದರು. ಇದನ್ನು ಮನ್ನಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 25 ಕ್ಕೆ ಮುಂದೂಡಿದೆ.

ರೋಹಿಣಿ ಅವರನ್ನು ರಾಜ್ಯ ಸರ್ಕಾರ 2018ರ ಮಾರ್ಚ್‌ 7ರಂದು ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಮತ್ತು ಹೈಕೋರ್ಟ್‌ನಲ್ಲಿ ಈಗ ಎರಡನೇ ಸುತ್ತಿನ ಹೋರಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.