ADVERTISEMENT

ಕಾರ್ಮಿಕ ನಿಧಿಗೆ ರಕ್ಷಣೆ: ರೋಹಿಣಿ ಸಿಂಧೂರಿಗೆ ‘ಶಿಕ್ಷೆ’‍

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:01 IST
Last Updated 23 ಸೆಪ್ಟೆಂಬರ್ 2019, 19:01 IST
ರೋಹಿಣಿ
ರೋಹಿಣಿ   

ಬೆಂಗಳೂರು: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ನೆರೆ ಪರಿಹಾರ ಹಾಗೂ ಅನ್ಯ ಉದ್ದೇಶಕ್ಕೆ ಬಳಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹುದ್ದೆ ತೋರಿಸದೇ ವರ್ಗಾವಣೆ ಮಾಡಿ ‘ಶಿಕ್ಷೆ’ಗೆ ಗುರಿಪಡಿಸಲಾಗಿದೆ ಎಂಬ ಆಕ್ಷೇಪ ಅಧಿಕಾರಿಗಳ ವಲಯದಿಂದಲೇ ವ್ಯಕ್ತವಾಗಿದೆ.

ಕಾರ್ಮಿಕರು ಹಾಗೂ ಅವರ ಮಕ್ಕಳ ಕಲ್ಯಾಣಕ್ಕಾಗಿ ತಂತ್ರಜ್ಞಾನ ಆಧಾರಿತ ಸೇವೆಯನ್ನು ಟೆಂಡರ್ ಕರೆಯದೇ ಕಿಯೋನಿಕ್ಸ್‌ಗೇ ಕೊಡಬೇಕು ಎಂದು ಕಾರ್ಮಿಕ ಇಲಾಖೆಯ ಪ್ರಭಾವಿ ಅಧಿಕಾರಿಯೊಬ್ಬರು ಒತ್ತಡ ಹಾಕುತ್ತಿದ್ದರು. ‘ನಿಯಮ ಮೀರಿ ಮಾಡಲು ಸಾಧ್ಯವೇ ಇಲ್ಲ’ ಎಂದು ರೋಹಿಣಿ ಪಟ್ಟು ಹಿಡಿದಿದ್ದರಿಂದ ‘ಕಟ್ಟಡ ಹಾಗೂ ನಿರ್ಮಾಣ ಕೆಲಸಗಾರರ ಕಲ್ಯಾಣ ಮಂಡಳಿ’ಯ ಕಾರ್ಯದರ್ಶಿ ಹುದ್ದೆಯಿಂದ ಅನ್ಯ ಹುದ್ದೆ ತೋರಿಸದೇ ಎತ್ತಂಗಡಿ ಮಾಡಲಾಗಿದೆ.

ತಮಗಾದ ಅನ್ಯಾಯದ ಬಗ್ಗೆ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೂ ರೋಹಿಣಿ ದೂರು ನೀಡಿದ್ದಾರೆ. ಆದರೆ, ಅದಕ್ಕೆ ಸ್ಪಂದನೆ ದೊರೆತಿಲ್ಲ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಕಟ್ಟಡ ನಿರ್ಮಾಣದ ಕ್ಷೇತ್ರದ ಸಂಸ್ಥೆಗಳು, ಉದ್ಯಮಿಗಳಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್‌ ರೂಪದಲ್ಲಿ ಸಂಗ್ರಹಿಸಿದ ಮೊತ್ತ ₹8 ಸಾವಿರ ಕೋಟಿ ನಿಧಿಯಲ್ಲಿದೆ.ಈ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆ
ಗಳು, ಕಾರ್ಮಿಕರು ಹಾಗೂ ಅವರ ಮಕ್ಕಳ ಆರೋಗ್ಯ, ಶಿಕ್ಷಣದಂತಹ ಪ್ರಮುಖ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ನಿರ್ದೇಶಿಸಿದೆ.

ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೋಹಿಣಿ ರೂಪಿಸಿದ್ದರು. ಕಾರ್ಮಿಕರ ಮಕ್ಕಳಿಗಾಗಿ ಬೆಂಗಳೂರಿನಲ್ಲಿ 100 ಪಾಲನಾ ಕೇಂದ್ರಗಳನ್ನೂ ತೆರೆಯುವ ಸಿದ್ಧತೆ ನಡೆಸಿದ್ದರು. ಸಂಪರ್ಕ ಕೇಂದ್ರ, ಸಹಾಯವಾಣಿಗೆ ಪೂರಕ ತಂತ್ರಜ್ಞಾನ ಹಾಗೂ ಆ್ಯಪ್ ಅಭಿವೃದ್ಧಿಯ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದರು.

ಈ ಬೆಳವಣಿಗೆಯ ಮಧ್ಯೆಯೇ, ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿಗಾಗಿ ಕಲ್ಯಾಣ ನಿಧಿಯಲ್ಲಿರುವ ₹3 ಸಾವಿರ ಕೋಟಿ ನೀಡುವಂತೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಒತ್ತಡ ಹಾಕಿದ್ದರು. ಹಿಂದಿನ ವರ್ಷಗಳಲ್ಲಿ ಖರ್ಚಾಗದೇ ಬಾಕಿ ಉಳಿದಿರುವ ಮೊತ್ತದಲ್ಲಿ ಶೇ 5ರಷ್ಟನ್ನು ಮಾತ್ರ ನೀಡಬಹುದು ಎಂದು ರೋಹಿಣಿ ಪ್ರತಿಕ್ರಿಯಿಸಿದ್ದರು. ಕೊನೆಗೆ ₹1 ಸಾವಿರ ಕೋಟಿಯನ್ನಾದರೂ ನೀಡುವಂತೆ ಉನ್ನತಾಧಿಕಾರಿ ಒತ್ತಡ ಹಾಕಿದ್ದರು.

‘ಕಿಯೋನಿಕ್ಸ್‌ಗೆ ತಂತ್ರಜ್ಞಾನ ಹಾಗೂ ಆ್ಯಪ್ ಅಭಿವೃದ್ಧಿ ಪಡಿಸುವಷ್ಟು ಪರಿಣತಿ ಇಲ್ಲ ಹಾಗೂ ಅದಕ್ಕೆ ಬೇಕಾದ ತಾಂತ್ರಿಕ ಸಿಬ್ಬಂದಿಯೂ ಇಲ್ಲ. ಅವರಿಗೆ ಕೊಟ್ಟರೆ ಹೊರಗುತ್ತಿಗೆ ನೀಡಿ, ಹಣ ದುರುಪಯೋಗಕ್ಕೆ ದಾರಿ ಯಾಗುತ್ತದೆ. ಹಿಂದೆಯೂ ಇಂತಹ ದೂರುಗಳು ಕಿಯೋನಿಕ್ಸ್‌ ಮೇಲೆ ಬಂದಿದ್ದು, ತನಿಖೆಯೂ ನಡೆದಿತ್ತು. ಅದರ ಬದಲು ಟೆಂಡರ್ ಕರೆದು ಅರ್ಹ ಸಂಸ್ಥೆ ನೀಡೋಣ’ ಎಂಬುದು ರೋಹಿಣಿ ಅವರ ನಿಲುವಾಗಿತ್ತು.

ಆದರೆ, ಕಿಯೋನಿಕ್ಸ್‌ಗೆ ನೀಡಬೇಕು ಎಂದು ಹಿರಿಯ ಅಧಿಕಾರಿ ಮೇಲಿಂದ ಮೇಲೆ ಪಟ್ಟು ಹಿಡಿದಿದ್ದರು. ಇದೂ ವರ್ಗಾವಣೆಗೆ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.