ADVERTISEMENT

ರೋಹಿಣಿ ಸಿಂಧೂರಿ ಜಮೀನು ವ್ಯಾಜ್ಯ: ಪ್ರತ್ಯೇಕ ಎಫ್ಐಆರ್

ರೋಹಿಣಿ ಸಿಂಧೂರಿ ಪತಿ ಪಾಲುದಾರಿಕೆಯಲ್ಲಿ ಖರೀದಿಸಿದ್ದ ಜಾಗ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 21:48 IST
Last Updated 5 ಡಿಸೆಂಬರ್ 2022, 21:48 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಬೆಂಗಳೂರು: ಯಲಹಂಕ ಕೆಂಚನಹಳ್ಳಿ ಬಳಿಯ ಜಮೀನು ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ಆರೋಪ– ಪ್ರತ್ಯಾರೋಪದಡಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ತಮ್ಮ ಮಾಲೀಕತ್ವದ ಜಾಗವನ್ನು ಲಕ್ಷ್ಮೀನಾರಾಯಣ ಹಾಗೂ ಇತರರು ಒತ್ತುವರಿ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿ ಬಾಲಿವುಡ್ ಗಾಯಕ ಮಕ್ಸೂದ್ ಮೊಹಮ್ಮದ್ ಅಲಿ ಉರುಫ್‌ ಲಕ್ಕಿ ಅಲಿ ದೂರು ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ಲಕ್ಷ್ಮೀನಾರಾಯಣ, ‘ಕಾನೂನು ಬದ್ಧವಾಗಿ ಜಮೀನು ಖರೀದಿಸಲಾಗಿದೆ. ಯಾವುದೇ ಹಕ್ಕಿಲ್ಲದಿದ್ದರೂ ಲಕ್ಕಿ ಅಲಿ ಹಾಗೂ ಇತರರು, ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಯಲಹಂಕ ನ್ಯೂ ಟೌನ್ ಪೊಲೀಸರು, ‘ಲಕ್ಕಿ ಅಲಿ ಹಾಗೂ ಲಕ್ಷ್ಮೀನಾರಾಯಣ ಇಬ್ಬರಿಂದಲೂ ಕೆಲ ದಿನಗಳ ಹಿಂದೆ ದೂರು ಸ್ವೀಕರಿಸಲಾಗಿದೆ. ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಜಮೀನು ಮಾಲೀಕತ್ವದ ವಿಚಾರ ನ್ಯಾಯಾಲಯದಲ್ಲಿದ್ದು, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಲಾಗಿದೆ’ ಎಂದರು.

‘ಲಕ್ಷ್ಮಿನಾರಾಯಣ ಅವರು ಸುಧೀರ್ ರೆಡ್ಡಿ, ಮಧು ರೆಡ್ಡಿ ಹಾಗೂ ಇತರರ ಪಾಲುದಾರಿಕೆಯಲ್ಲಿ ಜಮೀನು ಖರೀದಿಸಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಜಮೀನು ತಮ್ಮದೆಂದು ಹೇಳಿರುವ ಲಕ್ಷ್ಮಿನಾರಾಯಣ, ಅದಕ್ಕೆ ಸಂಬಂಧಪಟ್ಟ ದಾಖಲೆ ಒದಗಿಸಿದ್ದಾರೆ. ಜಮೀನು ವ್ಯಾಜ್ಯದ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆ ಇದ್ದು, ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ರೋಹಿಣಿ ಸಹಾಯ ಆರೋಪ: ಜಮೀನು ಮಾಲೀಕತ್ವದ ವಿಚಾರವಾಗಿ ಟ್ವೀಟ್ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ನೀಡಿರುವ ಬಾಲಿವುಡ್ ನಟ ಲಕ್ಕಿ ಅಲಿ, ‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಹಾಗೂ ಇತರರು, ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಭೂ ಮಾಫಿಯಾಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಹಾಯ ಮಾಡಿದ್ದಾರೆ. ಪೊಲೀಸರು ಸಹ ನನ್ನ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಎಸಿಪಿ ಸಹ ದೂರಿಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

ದೂರಿನ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಪ್ರವೀಣ್ ಸೂದ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಭೂ ಒತ್ತುವರಿ ಸಂಬಂಧ ರೋಹಿಣಿ ಸಿಂಧೂರಿ ಪತಿ ವಿರುದ್ಧ ಕೇಳಿಬಂದಿರುವ ಆರೋಪದ ಪೊಲೀಸರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

---

‘ಆಧಾರರಹಿತ ಆರೋಪ’

‘ಮಕ್ಸೂದ್ ಮೊಹಮ್ಮದ್ ಅಲಿ ಉರುಫ್‌ ಲಕ್ಕಿ ಅಲಿ ಆರೋಪ ಆಧಾರ ರಹಿತ ಹಾಗೂ ಸುಳ್ಳಾಗಿದೆ. ಇದರಿಂದ ನನಗೆ ಆಘಾತವಾಗಿದೆ’ ಎಂದು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಆದರೆ, ಜಮೀನು ಮಾಲೀಕತ್ವದ ವಿಚಾರದ ಬಗ್ಗೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ಇರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕ ಅನುಕಂಪ ಗಿಟ್ಟಿಸಲು ಈ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಸುಖಾಸುಮ್ಮನೇ ಆರೋಪ ಮಾಡಿ ಹೆಸರಿಗೆ ಧಕ್ಕೆ ತಂದಿರುವುದರ ವಿರುದ್ಧ ಕಾನೂನು ಹೋರಾಟ ನಡೆಸಲು ಯೋಚಿಸುತ್ತಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.