
ಬೆಂಗಳೂರು: ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಕ್ಯಾಂಪಸ್‌ನಲ್ಲಿ ಜಾತಿ ಆಧಾರಿತ ಭೇದ ತಡೆಯಲು ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ ‘ರೋಹಿತ್ ವೇಮುಲ ಮಸೂದೆ’ ಅಂತಿಮ ಹಂತದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಜಾರಿಗೊಳಿಸಿದ್ದ ‘ಸಮಾನತೆ’ ಉತ್ತೇಜಿಸುವ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ನಿಯಮ ಸಾಮಾನ್ಯ ವರ್ಗಗಳ ವಿರುದ್ಧ ಭೇದವನ್ನು ಉತ್ತೇಜಿಸುತ್ತವೆ ಎಂದು ಆರೋಪಿಸಿ, ಕೆಲವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಜಾತಿ ಆಧಾರಿತ ಭೇದ ವ್ಯಾಖ್ಯಾನಿಸುವ ನಿಯಮಕ್ಕೂ ಆಕ್ಷೇಪ ವ್ಯಕ್ತವಾಗಿತ್ತು. ಜಾತಿ ಆಧಾರಿತ ಭೇದ ತಡೆಯುವ ಜತೆಗೆ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸುವುದೂ ರಾಜ್ಯ ಸರ್ಕಾರದ ಆದ್ಯತೆ ಎಂದರು.
ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ವರ್ಗ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಮತ್ತು ಶಿಕ್ಷಣ ಹಕ್ಕು ಕಲ್ಪಿಸಲು ರಾಜ್ಯ ಸರ್ಕಾರ, ‘ರೋಹಿತ್ ವೇಮುಲ ಕಾಯ್ದೆʼ ರೂಪಿಸಲು ಮುಂದಾಗಿತ್ತು. ಮಸೂದೆಯನ್ನು 2025ರ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿತ್ತು. ಆದರೆ, ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.