ADVERTISEMENT

ಕಲಬುರ್ಗಿ: ಕಾಳಗಿಯ ರೌದ್ರಾವತಿ ಈಗ ನಯನ ಮನೋಹರೆ

ಕಲುಷಿತಗೊಂಡಿದ್ದ ನದಿಯನ್ನು ಸ್ವಚ್ಛಗೊಳಿಸಿದ ಯುವ ಪಡೆ

ಗುಂಡಪ್ಪ ಕರೆಮನೋರ
Published 12 ಜೂನ್ 2020, 19:30 IST
Last Updated 12 ಜೂನ್ 2020, 19:30 IST
ಕಾಳಗಿಯ ರೌದ್ರಾವತಿ ನದಿ ಸ್ವಚ್ಛಗೊಳಿಸುವ ಮೊದಲು
ಕಾಳಗಿಯ ರೌದ್ರಾವತಿ ನದಿ ಸ್ವಚ್ಛಗೊಳಿಸುವ ಮೊದಲು   

ಕಾಳಗಿ (ಕಲಬುರ್ಗಿ ಜಿಲ್ಲೆ): 1972-73ರ ಭೀಕರ ಬರಗಾಲದಲ್ಲಿಯೂ ಬತ್ತದ ಸೆಲೆಯಾಗಿ ಇಂದಿಗೂ ಹೆಸರುವಾಸಿಯಾದ ಕಾಳಗಿಯ ಐತಿಹಾಸಿಕ ‘ರೌದ್ರಾವತಿ’ ನದಿ ಸ್ವಚ್ಛಗೊಳಿಸಿದ ಯುವ ಪಡೆ ಜನರು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬಿರು ಬೇಸಿಗೆಯಲ್ಲೂ ಹನಿ ನೀರು ಕಡಿಮೆಯಾಗದೆ ವರ್ಷಪೂರ್ತಿ ಹರಿಯುವ ಆರಾಧ್ಯದೈವ ನೀಲಕಂಠ ಕಾಳೇಶ್ವರ ದೇವಸ್ಥಾನ ಪಕ್ಕದ ‘ರೌದ್ರಾವತಿ’ ನದಿ ಕೆಲ ವರ್ಷಗಳಿಂದ ಕಲುಷಿತಗೊಂಡಿತ್ತು. ನದಿಯೊಳಗೆ ಜೇಕು, ಬಳ್ಳಿ ಬೆಳೆದು ನೀರು ಕೆಟ್ಟದಾಗಿ ಕಂಡುಬರುತ್ತಿತ್ತು. ಹಾಗೆಯೇ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗತೊಡಗಿತ್ತು.

ಪಟ್ಟಣಕ್ಕೆ ಬರುತ್ತಿದ್ದ ಪ್ರವಾಸಿಗರು ನದಿ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳಿಂದಲೂ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಕಲಬುರ್ಗಿ ಜಿಲ್ಲಾಧಿಕಾರಿ, ಸೇಡಂ ಉಪ ವಿಭಾಗಾಧಿಕಾರಿ ಬಂದು ನೋಡಿ ಹೋಗಿದ್ದರೂ ಹೆಚ್ಚಿನ ಪ್ರಯೋಜನ ಆಗಿರಲಿಲ್ಲ.

ADVERTISEMENT

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಥಳೀಯ ಯುವಜನರು ನದಿಯನ್ನು ಸ್ವಚ್ಛಗೊಳಿಸಲು ಮುಂದಾದರು. ಎಂಟು ಮಂದಿಯಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ 20 ರಿಂದ 30 ಮಂದಿ ಕೈಜೋಡಿಸಿದರು. ಮಾರ್ಚ್ ಮೊದಲ ವಾರದಿಂದ ಕೊರೊನಾ ಲಾಕ್‌ಡೌನ್ ಮಧ್ಯೆಯೂ ಪರಸ್ಪರ ಅಂತರ ಕಾಯ್ದುಕೊಂಡು ಮೇ ತಿಂಗಳ ಕೊನೆಯವರೆಗೂ ಪ್ರತಿ ದಿನ ಬೆಳಿಗ್ಗೆ 7 ರಿಂದ 9ರವರೆಗೆ ಶ್ರಮ ಹಾಕಿದರು.

ಕೆಲ ದಾನಿಗಳು ಕಟ್ಟಿಗೆ, ಬೊಂಬು, ಪ್ಲಾಸ್ಟಿಕ್ ಬ್ಯಾರಲ್, ಹಗ್ಗ, ಬುಟ್ಟಿ ಇತರ ಸಾಮಾಗ್ರಿಗಳನ್ನು ಪಡೆದು ಹಡಗಿನಂತೆ ರಚಿಸಿ ನದಿಯಲ್ಲಿ ಸರಾಗವಾಗಿ ತೇಲಾಡಿ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಜಾತಿ, ಬೇಧ ಮರೆತು ಊರಿನ ಒಳತಿಗಾಗಿ ಶ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.