
ಬೆಂಗಳೂರು: ರೌಡಿ ಶೀಟರ್‌ಗಳನ್ನು ಮೌಖಿಕ ಆದೇಶ ಅಥವಾ ಮೌಖಿಕ ಸೂಚನೆ ಮೂಲಕ ಪೊಲೀಸ್ ಠಾಣೆಗೆ ಕರೆಸಿಕೊಳ್ಳುವ ಪದ್ಧತಿಗೆ ತಡೆ ಹಾಕಿರುವ ಹೈಕೋರ್ಟ್, ‘ರೌಡಿ ಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳುವ ದಿಸೆಯಲ್ಲಿ ರಾಜ್ಯ ಸರ್ಕಾರ ಸೂಕ್ತ ಪ್ರಕ್ರಿಯೆ ನಿಗದಿಪಡಿಸಬೇಕು. ಅಲ್ಲಿಯವರೆಗೂ ಎಸ್‌ಎಂಎಸ್, ವಾಟ್ಸ್ ಆ್ಯಪ್ ಮೂಲಕ ಸಂದೇಶ ನೀಡಿ ಠಾಣೆಗೆ ಕರೆಯಿಸಬಹುದು’ ಎಂದು ಆದೇಶಿಸಿದೆ.
ರೌಡಿಗಳನ್ನು ತನಿಖೆ ಅಥವಾ ವಿಚಾರಣೆಗಾಗಿ ಪೊಲೀಸ್ ಠಾಣೆಗಳಿಗೆ ಕರೆಯಿಸುವ ದಿಸೆಯಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ರೌಡಿಶೀಟರ್ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಕೇವಲ ರೌಡಿ ಪಟ್ಟಿಯಲ್ಲಿ ಹೆಸರಿದೆ ಎಂಬ ಕಾರಣಕ್ಕಾಗಿ ಪೊಲೀಸರು ಅವರನ್ನು ಆಗಾಗ್ಗೆ ಮೌಖಿಕ ಸೂಚನೆ ನೀಡಿ ಕರೆಸಿಕೊಳ್ಳಬಾರದು. ಈ ಸಂಬಂಧ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸಬೇಕು. ಅಲ್ಲಿಯವರೆಗೂ ರೌಡಿ ಶೀಟರ್‌ಗಳು ಪೊಲೀಸರಿಗೆ ತಮ್ಮ ಮೊಬೈಲ್ ನಂಬರ್ ನೀಡಬೇಕು. ಪೊಲೀಸರು ಅವರನ್ನು ಮೌಖಿಕವಾಗಿ ಸೂಚನೆ ನೀಡಿ ಕರೆಯಿಸಿಕೊಳ್ಳುವ ಬದಲಿಗೆ ಎಸ್‌ಎಂಎಸ್, ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಠಾಣೆಗೆ ಯಾವಾಗ ಹಾಜರಾಗಬೇಕೆಂದು ಸೂಚನೆ ನೀಡಬೇಕು. ಆಗಲೂ ಬರದಿದ್ದರೆ ಅವರ ಮನೆಗೆ ಹೋಗಬಹುದು’ ಎಂದು ನಿರ್ದೇಶಿಸಿದೆ.
ಆಕ್ಷೇಪ ಏನು?: ‘ನನ್ನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 24 ಪ್ರಕರಣಗಳಲ್ಲಿ ಈಗಾಗಲೇ ನಾನು ಬಿಡುಗಡೆ ಹೊಂದಿದ್ದೇನೆ. ರೌಡಿ ಶೀಟ್ ಹೊರತುಪಡಿಸಿ, ನನ್ನ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ. ಆದರೂ, ನನ್ನ ಮೇಲೆ ನಿಗಾ ಇಡುವ ನೆಪದಲ್ಲಿ, ಸಕಾರಣವಿಲ್ಲದೆ ಬಂಧಿಸುವುದರ ಜೊತೆಗೆ ಮೌಖಿಕವಾಗಿ ಸಮನ್ ಮಾಡಿ ನಿಂದಿಸಲಾಗುತ್ತಿದೆ’ ಎಂದು ಅರ್ಜಿದಾರರು ಅಕ್ಷೇಪಿಸಿದ್ದರು.
‘ಕರ್ನಾಟಕ ಪೊಲೀಸ್ ಕೈಪಿಡಿ–1965 ಅಥವಾ ಭಾರತೀಯ ನ್ಯಾಯ ಸಂಹಿತಾ–2023ರ ಅನುಸಾರ ರೌಡಿ ಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಗೆ ಸಮನ್ಸ್ ಜಾರಿ ಮಾಡುವ ವಿಧಾನದ ಬಗ್ಗೆ ಯಾವುದೇ ಕಾರ್ಯವಿಧಾನವಿಲ್ಲ. ಆದರೂ, ಪ್ರತಿವಾದಿಗಳು ನನಗೆ ಮೌಖಿಕವಾಗಿ ಸಮನ್ ಮಾಡಿ ಕರೆಸಿಕೊಳ್ಳುತ್ತಿದ್ದಾರೆ’ ಎಂದು ದೂರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.