ADVERTISEMENT

ಹತ್ತು ತಿಂಗಳಲ್ಲಿ 1,069 ಮಕ್ಕಳನ್ನು ರಕ್ಷಿಸಿದ ನೈರುತ್ಯ ರೈಲ್ವೆ

ವಿಶೇಷ ಸುರಕ್ಷತಾ ಅಭಿಯಾನ: ಅಪರಾಧ ಎಸಗಿದ 1,912 ಮಂದಿ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 15:04 IST
Last Updated 22 ಅಕ್ಟೋಬರ್ 2018, 15:04 IST
   

ಹುಬ್ಬಳ್ಳಿ: ಮನೆ ಬಿಟ್ಟು ಬಂದ ಹಾಗೂ ಆಕಸ್ಮಿಕವಾಗಿ ಪೋಷಕರಿಂದ ದೂರವಾದ 922 ಗಂಡು ಮಕ್ಕಳು ಹಾಗೂ 147 ಹೆಣ್ಣು ಮಕ್ಕಳು ಸೇರಿ ಒಟ್ಟು 1,069 ಮಕ್ಕಳನ್ನು ಹತ್ತು ತಿಂಗಳ ಅವಧಿಯಲ್ಲಿ ನೈರುತ್ಯ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಸಿಬ್ಬಂದಿ ರಕ್ಷಿಸಿದ್ದಾರೆ.

ಅವರಲ್ಲಿ 375 ಗಂಡು ಹಾಗೂ 61 ಹೆಣ್ಣು ಮಕ್ಕಳನ್ನು ‍ಮಕ್ಕಳಿಗಾಗಿ ಕೆಲಸ ಮಾಡುವ ಖಾಸಗಿ ಸಂಸ್ಥೆಗಳಿಗೆ (ಎನ್‌ಜಿಒ), 544 ಗಂಡು ಮಕ್ಕಳು ಹಾಗೂ 77 ಹೆಣ್ಣು ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಉಳಿದವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.

ರೈಲ್ವೆ ಅಪರಾಧದ ವಿರುದ್ಧ ಸಹ ವಿಶೇಷ ಅಭಿಯಾನ ನಡೆಸಿರುವ ಸಿಬ್ಬಂದಿ, ರೈಲು ಸಂಚಾರಕ್ಕೆ ತಡೆಯೊಡ್ಡುವ, ‍ಪ್ರಯಾಣಿಕರಿಗೆ ತೊಂದರೆ ಮಾಡಿದ 1,915 ಮಂದಿ ವಿರುದ್ಧ ಕ್ರಮ ಕೈಗೊಂಡು, ಸುಮಾರು ₹9 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ರೈಲು ನಿಲ್ಲಿಸಲು ಬಳಸುವ ಸರಪಳಿ (ಐಸಿಸಿ) ಅನಗತ್ಯವಾಗಿ ಎಳೆಯುವುದು, ರೈಲ್ವೆ ಕ್ರಾಸಿಂಗ್‌ನಲ್ಲಿ ಸಂಚಾರಕ್ಕೆ ಅಡಚಣೆ ಮಾಡುವುದು, ಅಕ್ರಮವಾಗಿ ರೈಲಿನಲ್ಲಿ ವ್ಯಾಪಾರ, ಫುಟ್‌ಬೋರ್ಡ್‌ ಪ್ರಯಾಣ, ಮಹಿಳೆಯರ ಬೋಗಿಯಲ್ಲಿ ಪುರುಷರ ಪ್ರಯಾಣ, ಬೀಡಿ ಸಿಗರೇಟು ಸೇದುವುದು ಇದರಲ್ಲಿ ಪ್ರಮುಖವಾಗಿವೆ.

ADVERTISEMENT

ಮುಖ್ಯ ಸುರಕ್ಷತಾ ಕಮಿಷನರ್ ದೇಬಸ್ಮಿತ್ ಚಟ್ಟೋಪಾಧ್ಯಾಯ ಅವರ ನೇತೃತ್ವದ ತಂಡ ಸಹ ವಿಶೇಷ ಕಾರ್ಯಾಚರಣೆ ನಡೆಸಿದೆ. ನಿಯಮ ಉಲ್ಲಂಘನೆ ಸಾಮಾನ್ಯವಾಗಿರುವ ವಿಭಾಗದ ಕಡೆ ಹೆಚ್ಚಿನ ಗಮನ ವಹಿಸುವುದು, ತಡ ರಾತ್ರಿ ಮತ್ತು ನಸುಕಿನಲ್ಲಿ ಗಸ್ತು ಮಾಡುವುದು, ಬೋಗಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದು, ಮಹಿಳಾ ಬೋಗಿಯಲ್ಲಿ ಸುರಕ್ಷತೆಯನ್ನು ಖಚಿತಗೊಳಿಸುವುದನ್ನು ಈ ತಂಡ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.