ಬೆಂಗಳೂರು: ‘ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭಾವಚಿತ್ರ ಹಾಕಿ ಸೆಟ್‌ಟಾಪ್ ಬಾಕ್ಸ್ ಕೊಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ‘ಇದು ನನ್ನ ಬ್ಯುಸಿನೆಸ್. ಹೀಗಾಗಿ, ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದೂ ಅಭ್ಯರ್ಥಿ ಹೇಳಿದ್ದಾರೆ. ಚುನಾವಣಾ ಆಯೋಗ ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಆಗ್ರಹಿಸಿದರು.
‘ಮಾರುತಿ ಮಾನ್ಪಡೆ ಸಾವಿಗೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾರಣ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಮೊದಲು ನಮ್ಮಿಬ್ಬರ ಮೇಲೆ ಕೇಸ್ ದಾಖಲು ಮಾಡಲಿ’ ಎಂದು ಸವಾಲು ಹಾಕಿದರು.
ಚುನಾವಣಾ ಅಖಾಡದಲ್ಲಿ ಒಕ್ಕಲಿಗ ಜಾತಿ ಕಾರ್ಡ್ ಬಳಸುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಎಲ್ಲಿಯೂ ಕೂಡ ಒಕ್ಕಲಿಗ ಜಾತಿ ಕಾರ್ಡ್ ಬಳಸಿಲ್ಲ. ಯಡಿಯೂರಪ್ಪ ಅವರು ಗೋಕಾಕ್‌ನಲ್ಲಿ ಜಾತಿ ಕಾರ್ಡ್ ಬಳಸಿದಂತೆ ನಾನು ಬಳಸಿಲ್ಲ. ವೀರಶೈವರು ಬಿಜೆಪಿಗೆ ಮತ ಹಾಕಿ ಎಂದು ಅವರು ಹೇಳಿದ್ದರಲ್ಲ. ಈಗ ಸದಾನಂದಗೌಡ, ಸಿ.ಟಿ. ರವಿ, ಅಶ್ವಥ್ ನಾರಾಯಣ, ಅಶೋಕ ಅವರೇ ಯಾಕೆ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಜಾತಿ ರಾಜಕೀಯ ಮಾಡುವುದು ಬಿಜೆಪಿಯವರು. ನಮಗೆ ಒಂದೇ ಜಾತಿ. ಅದು ಕಾಂಗ್ರೆಸ್ ಜಾತಿ’ ಎಂದೂ ಅವರು ಹೇಳಿದರು.
ಆಯೋಗಕ್ಕೆ ದೂರು: ‘ಸೆಟ್‌ಟಾಪ್ ಬಾಕ್ಸ್ ಕೊಡುವುದು ನನ್ನ ಬ್ಯುಸಿನೆಸ್’ ಎಂದು ಹೇಳಿಕೆ ನೀಡಿರುವ ಮುನಿರತ್ನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.