ADVERTISEMENT

ಆಯೋಧ್ಯೆಯಲ್ಲಿ ರಾಮ ಮಂದಿರ: ಬಿಜೆಪಿ ಮೇಲೆ ಹೆಚ್ಚಿದ ಒತ್ತಡ

ಆರ್‌ಎಸ್‌ಎಸ್‌ ಪ್ರಚಾರ ಬೈಠಕ್‌ನಲ್ಲಿ ಅಮಿತ್‌ ಶಾಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:59 IST
Last Updated 14 ನವೆಂಬರ್ 2018, 19:59 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ರಾತ್ರಿ ಮಂಗಳೂರಿನ ಸಂಘನಿಕೇತನಕ್ಕೆ ಬಂದರು. – ಪ್ರಜಾವಾಣಿ ಚಿತ್ರ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ರಾತ್ರಿ ಮಂಗಳೂರಿನ ಸಂಘನಿಕೇತನಕ್ಕೆ ಬಂದರು. – ಪ್ರಜಾವಾಣಿ ಚಿತ್ರ   

ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮೇಲೆ ಒತ್ತಡ ಹೆಚ್ಚಾಗಿದೆ. ನಗರದ ಸಂಘ ನಿಕೇತನದಲ್ಲಿ ಬುಧವಾರ ರಾತ್ರಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಬೈಠಕ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಸಂಘದ ಪ್ರಮುಖರು ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಮಮಂದಿರ ವಿಷಯವನ್ನೇ ಬಿಜೆಪಿ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿತ್ತು. ಇದೀಗ ಮತ್ತೊಂದು ಲೋಕಸಭೆ ಚುನಾವಣೆ ಎದುರಾಗಿದ್ದು, ಈ ಹಂತದಲ್ಲಾದರೂ ಸೂಕ್ತ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಸಂಘದ ಪ್ರಮುಖರು ಸೂಚನೆ ನೀಡಿದ್ದಾರೆ ಎಂದು ಆರ್‌ಎಸ್‌ಎಸ್‌ ಮೂಲಗಳು ತಿಳಿಸಿವೆ.

ಪ್ರಮುಖರ ಸಲಹೆಗಳನ್ನು ಆಲಿಸಿದ ಅಮಿತ್‌ ಶಾ, ಈ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಬೇಕಾಗಿದೆ. ಲೋಕಸಭೆ ಚುನಾವಣೆಗೂ ಮುನ್ನವೇ ಸ್ಪಷ್ಟ ನಿರ್ಧಾರಕ್ಕೆ ಬರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಲೋಕಸಭೆ ಚುನಾವಣೆ ತಂತ್ರ: ರಾಜ್ಯದಲ್ಲಿ ಈಚೆಗೆ ನಡೆದ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಗಳಲ್ಲಿ ಪಕ್ಷ ಅನುಭವಿಸಿರುವ ಹಿನ್ನಡೆಯ ಕುರಿತೂ ವಿಸ್ತೃತ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಪಕ್ಷ ಗೆಲುವು ಸಾಧಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲುವುದು ಅವಶ್ಯಕ. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವಂತೆ ಅಮಿತ್‌ ಶಾ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಪ್ರಮುಖರು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕೆ ಸಹಕಾರ ನೀಡಲಾಗುವುದು. ಅದಕ್ಕೂ ಮೊದಲು ರಾಮಮಂದಿರ ನಿರ್ಮಾಣದ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು ಎಂದು ತಿಳಿದು ಬಂದಿದೆ.

ಆರ್‌ಎಸ್‌ಎಸ್ ಸರಕಾರ್ಯವಾಹ ಸುರೇಶ ಭೈಯ್ಯಾಜಿ ಜೋಷಿ ನೇತೃತ್ವದಲ್ಲಿ ವಿಶೇಷ ವರ್ಗ ನಡೆದಿದ್ದು, ಆರ್‌ಎಸ್‌ಎಸ್‌ನ ವಿವಿಧ ಮುಖಂಡರು ಭಾಗವಹಿಸಿದ್ದರು.

ಗೋಪ್ಯ ಚರ್ಚೆ

ಆರ್‌ಎಸ್‌ಎಸ್‌ ವಿಶೇಷ ಬೈಠಕ್‌ನಲ್ಲಿ ಸಂಘ ಪರಿವಾರದ ಪ್ರಮುಖರನ್ನು ಹೊರತುಪಡಿಸಿ, ಬೇರೆ ಯಾರಿಗೂ ಪ್ರವೇಶ ನೀಡಿರಲಿಲ್ಲ. ಸಂಜೆ ತಡವಾಗಿ ನಗರಕ್ಕೆ ಬಂದ ಅಮಿತ್ ಶಾ, ನೇರವಾಗಿ ಸಂಘನಿಕೇತನಕ್ಕೆ ತೆರಳಿದರು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದ್ದು, ಗೋಪ್ಯ ಚರ್ಚೆ ನಡೆಸಲಾಗಿದೆ. ವಿಸ್ತೃತ ಮಾಹಿತಿಯನ್ನು ನೀಡುವುದಕ್ಕೆ ಸಂಘದ ಪ್ರಮುಖರು ನಿರಾಕರಿಸಿದರು. ಅಮಿತ್ ಶಾ ರಾತ್ರಿ ನಗರದಲ್ಲಿಯೇ ವಾಸ್ತವ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.