ADVERTISEMENT

ಕೃಷಿ ವ್ಯಾಪ್ತಿಗೆ ರಬ್ಬರ್‌ ಬೆಳೆ: ಸಚಿವ ಸಂತೋಷ ಲಾಡ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 16:03 IST
Last Updated 16 ಡಿಸೆಂಬರ್ 2025, 16:03 IST
ಬೆಳಗಾವಿ ಸುವರ್ಣ ವಿಧಾನಸೌಧ
ಬೆಳಗಾವಿ ಸುವರ್ಣ ವಿಧಾನಸೌಧ   

ಸುವರ್ಣ ವಿಧಾನಸೌಧ (ಬೆಳಗಾವಿ): ರಬ್ಬರ್‌ ಬೆಳೆ ಪ್ರತಿ ಕೆ.ಜಿಗೆ ₹258 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ, ಕೃಷಿ ಇಲಾಖೆ ವ್ಯಾಪ್ತಿಗೆ ತರುವ ಕುರಿತು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತೋಟಗಾರಿಕಾ ಸಚಿವರ ಪರವಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ಪ್ರತಾಪಸಿಂಹ ನಾಯಕ್‌, ತಳವಾರ್‌ ಸಾಬಣ್ಣ, ಡಾ.ಧನಂಜಯ ಸರ್ಜಿ ಅವರು ‘ಕೇರಳದಲ್ಲಿ ರಬ್ಬರ್‌ ಬೆಳೆಯನ್ನು ಕೃಷಿ ಉತ್ಪನ್ನವೆಂದು ಪರಿಗಣಿಸಲಾಗಿದೆ. ಪ್ರತಿ ಕೆ.ಜಿ.ಗೆ ₹258 ಎಂಎಸ್‌ಪಿ ನಿಗದಿ ಮಾಡಲಾಗಿದೆ. ಕರ್ನಾಟಕ ರಬ್ಬರ್‌ ಬೆಳೆಗಾರರೂ ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಪ್ರಸ್ತಾಪಿಸಿದ ವಿಷಯ ಕುರಿತು ಉತ್ತರ ನೀಡಿದ ಅವರು, ರಾಜ್ಯದಲ್ಲಿ 50,800 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್‌ ಬೆಳೆಯಲಾಗುತ್ತಿದೆ. 5.27 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ರಬ್ಬರ್‌ ಅನ್ನು ಕೃಷಿ ಬೆಳೆಯನ್ನಾಗಿ ಪರಿವರ್ತಿಸಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ರಬ್ಬರ್‌ ಬೆಳೆ ಕೃಷಿ ಇಲಾಖೆ ವ್ಯಾಪ್ತಿಗೆ ಸೇರಿದರೆ ಬೆಳೆಗಾರರಿಗೆ ಬ್ಯಾಂಕ್‌ ಸಾಲ ಸೇರಿ ಹಲವು ಸವಲತ್ತುಗಳು ಸಿಗಲಿವೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.