ADVERTISEMENT

Karnataka Assembly | ಅಂಬೇಡ್ಕರ್‌ ಸೋಲು: ಕೋಲಾಹಲ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 0:11 IST
Last Updated 18 ಮಾರ್ಚ್ 2025, 0:11 IST
<div class="paragraphs"><p>ವಿಧಾನಸಭೆ</p></div>

ವಿಧಾನಸಭೆ

   

(ಪ್ರಾತಿನಿಧಿಕ ಚಿತ್ರ)

ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದವರು ಯಾರು ಎಂಬ ಪ್ರಶ್ನೆ ವಿಧಾನಸಭೆಯಲ್ಲಿ ಸೋಮವಾರ ಕೋಲಾಹಲ ಎಬ್ಬಿಸಿತು. ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸವಾಲು– ಪ್ರತಿಸವಾಲಿಗೂ ಕಾರಣವಾಯಿತು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಪರಿಶಿಷ್ಟರ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿಗೆ ಬದ್ಧತೆ ಇಲ್ಲ’ ಎಂದು ಟೀಕಿಸಿದರು.

ಆಗ ಬಿಜೆಪಿಯ ಡಿ. ವೇದವ್ಯಾಸ ಕಾಮತ್‌, ಹರೀಶ್ ಪೂಂಜ, ಡಾ. ಚಂದ್ರು ಲಮಾಣಿ, ದೊಡ್ಡನಗೌಡ ಪಾಟೀಲ, ಸಿಮೆಂಟ್‌ ಮಂಜು, ಬಸನಗೌಡ ಪಾಟೀಲ ಯತ್ನಾಳ, ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮತ್ತಿತರರು ಅಂಬೇಡ್ಕರ್‌ ವಿಷಯ ಪ್ರಸ್ತಾಪಿಸಿದರು.

‘ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ನಿಧನದ ನಂತರ ಅಂಬೇಡ್ಕರ್‌ ಅವರ ಅಂತ್ಯಸಂಸ್ಕಾರಕ್ಕೆ ಮತ್ತು ಸ್ಮಾರಕ ನಿರ್ಮಾಣಕ್ಕೆ ದೆಹಲಿಯಲ್ಲಿ ಸ್ಥಳಾವಕಾಶ ನೀಡದೆ ಅವಮಾನಿಸಿದವರು ಯಾರು’ ಎಂದು ಬಿಜೆಪಿ ಸದಸ್ಯರು ಏರಿ ಧ್ವನಿಯಲ್ಲಿ ಕೇಳಿದರು.

ಪತ್ರ ತೋರಿಸುವಂತೆ ಬಿಜೆಪಿಯವರು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ‘ಪತ್ರ ತೋರಿಸುತ್ತೇನೆ. ‍ಪತ್ರದಲ್ಲಿರುವುದು ನಿಜವಾದರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಪತ್ರದಲ್ಲಿ ಹಾಗೆ ಉಲ್ಲೇಖವಿಲ್ಲದಿದ್ದರೆ ರಾಜೀನಾಮೆ ನೀಡಲು ನಾನು ಸಿದ್ಧ’ ಎಂದು ಸವಾಲು ಹಾಕಿದರು.

‘ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌. ನೆಹರೂ ಮೀಸಲಾತಿಯನ್ನೂ ವಿರೋಧಿಸಿದ್ದರು’ ಎಂದು ಯತ್ನಾಳ ಆರೋಪಿಸಿದರು.

‘ಕಾಂಗ್ರೆಸ್‌ನವರೇ ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಎಂದು ಕೆ.ಆರ್‌. ರಮೇಶ್ ಕುಮಾರ್‌ ಅವರು ಇದೇ ಸದನದಲ್ಲಿ ಹೇಳಿದ್ದರು’ ಎಂದು ಬೆಲ್ಲದ ಹೇಳಿದರು.

ಕೆಲ ಸಮಯದ ಬಳಿಕ ಸಿಬ್ಬಂದಿಯಿಂದ ಬ್ಯಾಗ್‌ ತರಿಸಿಕೊಂಡ ಪ್ರಿಯಾಂಕ್‌ ಅವರು, ಮೂರು ಪುಟಗಳ ಪತ್ರವೊಂದನ್ನು ತೆಗೆದು ಪ್ರದರ್ಶಿಸಿದರು. ‘1952ರ ಜನವರಿ 18ರಂದು ಅಂಬೇಡ್ಕರ್ ಅವರು ತಮ್ಮ ಪರಿಚಯಸ್ಥರಿಗೆ ಬರೆದ ಪತ್ರದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ತಮ್ಮ ಚುನಾವಣಾ ಸೋಲಿನಲ್ಲಿ ಹೇಗೆ ಪಾತ್ರ ವಹಿಸಿದ್ದಾರೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ’ ಎಂದು ಪತ್ರದ ಸಾಲುಗಳನ್ನು ಉಲ್ಲೇಖಸಿದರಲ್ಲದೇ, ‘ಸವಾಲು ಸ್ವೀಕರಿಸಿ ಚರ್ಚೆಗೆ ಬನ್ನಿ’ ಎಂದು ಬಿಜೆ‍‍ಪಿ ಸದಸ್ಯರಿಗೆ ಪಂಥಾಹ್ವಾನ ನೀಡಿದರು.

ಮಧ್ಯಾಹ್ನದ ಬಳಿಕ ಅಂಬೇಡ್ಕರ್‌ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು. ಆಗ ಮತ್ತೆ ಬಿಜೆಪಿ ಸದಸ್ಯರು ಸಚಿವ ಪ್ರಿಯಾಂಕ್‌ ಅವರನ್ನುದ್ದೇಶಿಸಿ ಏರಿದ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು. ‘ಹೆದರಿಸಲು ಬರಬೇಡಿ. ಇದು ಸದನ, ಆರ್‌ಎಸ್‌ಎಸ್‌ ಕಚೇರಿಯಲ್ಲ ಹುಷಾರು’ ಎಂದು ಪ್ರಿಯಾಂಕ್‌ ತಿರುಗೇಟು ನೀಡಿದರು.

ತಮ್ಮ ಪತ್ರದಲ್ಲಿ, ಡಾ. ಅಂಬೇಡ್ಕರ್ ಅವರು ಸಾವರ್ಕರ್‌ ತಮ್ಮ ಸೋಲಿಗೆ ಕಾರಣವೆಂದು ನಂಬಿದ ಅಂಶಗಳನ್ನು ವಿವರಿಸಿದ್ದಾರೆ. ಸಾವರ್ಕರ್ ಅವರ ಪ್ರಭಾವ ಮತ್ತು ರಾಜಕೀಯ ಕೌಶಲವನ್ನು ತಮ್ಮ ಪತ್ರದಲ್ಲಿ ಎತ್ತಿ ತೋರಿಸಿದ್ದರು.

‘ಸದನದಿಂದ ಬಿಸಾಕಬೇಕಾಗುತ್ತದೆ’
‘ಇಷ್ಟವಿಲ್ಲದಿದ್ದರೆ ಸದನದಿಂದ ಹೊರ ನಡೆಯಿರಿ. ಇಲ್ಲದಿದ್ದರೆ ತೆಗೆದು ಬಿಸಾಕಬೇಕಾಗುತ್ತದೆ’ ಎಂದು ಯು.ಟಿ. ಖಾದರ್‌ ಅವರು ಸದಸ್ಯರಿಗೆ ಎಚ್ಚರಿಕೆ ನೀಡಿದರು. ಅಂಬೇಡ್ಕರ್ ಅವರ ವಿಷಯದಲ್ಲಿ ಸದನದಲ್ಲಿ ದೀರ್ಘ ಕಾಲ ಗದ್ದಲ ಮುಂದುವರಿಯಿತು. ವಿರೋಧ ಮತ್ತು ಆಡಳಿತ ಪಕ್ಷದ ಸದಸ್ಯ ಮಾತಿನ ಚಕಮಕಿ ಜೋರಾಯಿತು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಸಿಟ್ಟಾದ ಖಾದರ್‌ ಮೇಲಿನಂತೆ ಎಚ್ಚರಿಕೆ ನೀಡಿದರು. ಸ್ಪೀಕರ್‌ ಮಾತನ್ನೂ ಬಿಜೆಪಿಯವರು ಆಕ್ಷೇಪಿಸಿದರು. ಕೆಲ ಸಮಯದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.