ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ‘ರುಪ್ಸಾ’ ಪ್ರತಿಭಟನೆ

ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಸಂಘ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 19:18 IST
Last Updated 4 ಜನವರಿ 2021, 19:18 IST
ಖಾಸಗಿ ಶಾಲೆಗಳು– ಪ್ರಾತಿನಿಧಿಕ ಚಿತ್ರ
ಖಾಸಗಿ ಶಾಲೆಗಳು– ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ (ಜ. 6) ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಸಂಘ (ರುಪ್ಸಾ) ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ‘ರಾಜ್ಯದ ಎಲ್ಲ 30 ಜಿಲ್ಲೆಗಳಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಸೇರಿ 8 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆ
ಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಂದು ಬೆಳಿಗ್ಗೆ 10 ಗಂಟೆಗೆ ಮೌರ್ಯ ವೃತ್ತದಿಂದ ರ‍್ಯಾಲಿ ಹೊರಡಲಿದೆ’ ಎಂದರು.

‘ಪ್ರತಿಭಟನೆ ನಡೆಯುವ ದಿನ ಆಫ್‌ಲೈನ್ - ಆನ್‌ಲೈನ್ ತರಗತಿಗಳು ಎಂದಿನಂತೆ ನಡೆಯಲಿವೆ. ಪ್ರತಿ ಶಾಲೆಯಿಂದ ಒಬ್ಬರು‌ ಅಥವಾ ಇಬ್ಬರು ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

‘ಮೂರು ತಿಂಗಳಿನಿಂದ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಕೊಟ್ಟಿದ್ದೆವು. 15 ಬೇಡಿಕೆಗಳಲ್ಲಿ ಎರಡು ಬೇಡಿಕೆಗಳನ್ನು ಮಾತ್ರ ಈವರೆಗೆ ಸರ್ಕಾರ ಈಡೇರಿಸಿದೆ. ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ಕನಿಷ್ಠ ಒಂದು ಸಾವಿರ ಕೋಟಿಯ ಪ್ಯಾಕೇಜ್ ಘೋಷಿಸಬೇಕು, ಸಂಬಳ ಇಲ್ಲದ ಶಿಕ್ಷಕರಿಗೆ ಪ್ರತಿ ತಿಂಗಳ ₹ 10 ಸಾವಿರ ನೀಡಬೇಕು, 1985ರಿಂದ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಸೇರಿದಂತೆ ಇತರ ಬೇಡಿಕೆಗಳು ಹಾಗೇ ಉಳಿದಿವೆ’ ಎಂದು ಸರ್ಕಾರದ ನಡೆಗೆ ಅವರು ಬೇಸರ ವ್ಯಕ್ತಪಡಿಸಿದರು.

‘ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು. 'ಶಿಕ್ಷಣ ಮಂತ್ರಿಗಳೇ ತೊಲಗಿ' ಎಂದೂ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.

‘ರುಪ್ಸಾ ಅಡಿಯಲ್ಲಿ ನೋಂದಣಿ ಗೊಂಡಿರುವ ಶಾಲೆಗಳ ಮಾಹಿತಿ ಬಿಡುಗಡೆ ಮಾಡಲಾಗಿದೆ. ಒಟ್ಟು 12,998 ಶಾಲೆಗಳು ಅಧಿಕೃತವಾಗಿ ರುಪ್ಸಾ ಶಾಲಾ ಒಕ್ಕೂಟದಲ್ಲಿ ನೋಂದಣಿ ಆಗಿವೆ. ಸಂಘದ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ಲಭ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.