ADVERTISEMENT

ಕಟ್ಟಡ ದಾಖಲಾತಿ: ರುಪ್ಸ ಆಕ್ಷೇಪ

ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ: ಕಾಲಾವಕಾಶ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 18:37 IST
Last Updated 3 ಡಿಸೆಂಬರ್ 2021, 18:37 IST
ಶಾಲೆಗಳು
ಶಾಲೆಗಳು   

ಬೆಂಗಳೂರು: ಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಕೈಗೊಂಡಿರುವ ಆನ್‌ಲೈನ್‌ ಪ್ರಕ್ರಿಯೆ ಸಂದರ್ಭದಲ್ಲಿ ತಕ್ಷಣಕ್ಕೆ ವಿವಿಧ ಪ್ರಮಾಣಪತ್ರಗಳನ್ನು ಒದಗಿಸಬೇಕು ಎಂದು ಶಿಕ್ಷಣ ಇಲಾಖೆ ನೀಡಿರುವ ಆದೇಶಕ್ಕೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸ) ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುವ ರುಪ್ಸ, ದಾಖಲೆಗಳ ಸಲ್ಲಿಕೆಗೆ ಕನಿಷ್ಠ ಐದು ವರ್ಷಗಳ ಕಾಲಾವಕಾಶ ನೀಡಬೇಕು ಎಂದು ಕೋರಿಕೆ ಸಲ್ಲಿಸಿದೆ.

ಅಧಿಕಾರಿಗಳ ಕಿರುಕುಳ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ ಶಾಲೆ ಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಿ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಿದ್ದು ಮಹತ್ವದ ಹೆಜ್ಜೆ ಯಾಗಿದೆ. 2009ರಿಂದಲೂ ನವೀಕರಣ ಪ್ರಕ್ರಿಯೆ ಖಾಸಗಿ ಶಾಲೆಗಳಿಗೆ ದೊಡ್ಡ ಸಮಸ್ಯೆಯಾಗಿತ್ತು ಎಂದು ರುಪ್ಸ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಆದರೆ, ಇಲಾಖೆಯ ಕೆಲವು ಆದೇಶಗಳು ಆಕ್ಷೇಪಾರ್ಹವಾಗಿವೆ. ಕಟ್ಟಡ ಸುರಕ್ಷತೆ, ಅಗ್ನಿ ಅವಘಡದ ಸುರಕ್ಷತೆಯ ಪ್ರಮಾಣಪತ್ರ, ಭೂಪರಿ ವರ್ತನಾ ದಾಖಲಾತಿಗಳನ್ನು ತಕ್ಷಣಕ್ಕೆ ಒದಗಿಸಬೇಕು ಎಂದು ಸೂಚಿಸಲಾಗಿದೆ. ಈ ರೀತಿಯ ಆದೇಶ ಅವೈಜ್ಞಾನಿಕವಾಗಿದೆ ಎಂದು ದೂರಿದ್ದಾರೆ.

ಕಟ್ಟಡ ಸುರಕ್ಷತೆ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ಕಳೆದ ವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಎಲ್ಲ ದಾಖಲಾತಿಗಳನ್ನು ಒದಗಿಸಲು ಕೆಲವು ವರ್ಷಗಳೇ ಬೇಕಾಗಬಹುದು. ಬಹುತೇಕ ಖಾಸಗಿ ಶಾಲಾ ಕಟ್ಟಡಗಳು ನಿರ್ಮಾಣಗೊಂಡು ಕೆಲವು ದಶಕಗಳಾಗಿವೆ. ಈಗ ಆ ಕಟ್ಟಡಗಳ ಮಣ್ಣು ಪರೀಕ್ಷೆ ವರದಿ, ಕಟ್ಟಡದ ನೀಲನಕಾಶೆ, ಕಟ್ಟಡ ರಚನೆ ನಕಾಶೆ, ಅನುಮತಿ ಪ್ರಮಾಣಪತ್ರ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ, ಕಟ್ಟಡ ಪ್ರವೇಶಕ್ಕೆ ಅನುಮತಿ ಪತ್ರ ಇತ್ಯಾದಿ ದಾಖಲಾತಿಗಳನ್ನು ತಕ್ಷಣಕ್ಕೆ ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.