ADVERTISEMENT

ತರಬೇತಿ, ಮಾನ್ಯತೆಗೆ ಗ್ರಾಮೀಣ ಪ್ರಥಮ ಚಿಕಿತ್ಸಕರ ಅಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 10:30 IST
Last Updated 20 ಡಿಸೆಂಬರ್ 2018, 10:30 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಪ್ರಥಮ ಚಿಕಿತ್ಸಾ ವೈದ್ಯರ ಸಂಘದವರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಪ್ರಥಮ ಚಿಕಿತ್ಸಾ ವೈದ್ಯರ ಸಂಘದವರು ಪ್ರತಿಭಟನೆ ನಡೆಸಿದರು   

ಬೆಳಗಾವಿ: ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ತರಬೇತಿ ಮತ್ತು ಮಾನ್ಯತೆ ನೀಡುವಂತೆ ಆಗ್ರಹಿಸಿ ರಾಜ್ಯ ಗ್ರಾಮೀಣ ಪ್ರಥಮ ಚಿಕಿತ್ಸಾ ವೈದ್ಯರ ಸಂಘದವರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ಸೌಲಭ್ಯವಂಚಿತ ಹಳ್ಳಿಗಳಲ್ಲಿ ಸಂಚರಿಸುವ ನಾವು, ರೋಗಿಗಳಿಗೆ ಬಳಿಗೇ ಹೋಗಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಪ್ರಥಮ ಚಿಕಿತ್ಸೆ ನೀಡುವುದನ್ನು ಸಮಾಜಸೇವೆ ಎಂದು ಪರಿಗಣಿಸಿ ಅಲೆಯುತ್ತಿದ್ದೇವೆ. ಅನುಭವಿ ವೈದ್ಯರ ಬಳಿ 5 ವರ್ಷ ತರಬೇತಿ ಪಡೆದು ಕಾರ್ಯನಿರ್ವಹಿಸುತ್ತಿದ್ದೇವೆ. ಒಂದೂವರೆ ಲಕ್ಷ ಸಂಖ್ಯೆಯಲ್ಲಿರುವ ನಮ್ಮ ಕೆಲಸಕ್ಕೆ ಸರ್ಕಾರವು ತಡೆ ಒಡ್ಡುತ್ತಿದೆ. ಇದೇ ರೀತಿ ತೊಂದರೆ ಮುಂದುವರಿದಲ್ಲಿ ನಮ್ಮ ಕುಟುಂಬಗಳು ಬೀದಿಗೆ ಬೀಳುತ್ತವೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಕೋರಿದರು.

‘ಪ್ರಥಮ ಚಿಕಿತ್ಸಕರ ಸೇವೆ ಪರಿಗಣಿಸಿ ಆಂಧ್ರಪ್ರದೇಶ ಸರ್ಕಾರವು ಒಂದು ವರ್ಷ ತರಬೇತಿ ನೀಡಿ ನಾವು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ನಮ್ಮಲ್ಲೂ ಅದೇ ರೀತಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘2007ರ ಕೆಪಿಎಂಇ ಕಾಯ್ದೆ ಪ್ರಕಾರ ನಮ್ಮನ್ನು ನಕಲಿಗಳೆಂದು ಪರಿಗಣಿಸಿ, ಕೆಲಸಕ್ಕೆ ತಡೆ ಒಡ್ಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಹಿಂದಿನ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರ ಸಲಹೆಯಂತೆ ಜಿಲ್ಲಾವಾರು ಸಂಘದ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆ ಪಟ್ಟಿಯಲ್ಲಿರುವ ಸದಸ್ಯರಿಗೆ ತರಬೇತಿ ಮತ್ತು ಮಾನ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಅಧ್ಯಕ್ಷ ಎಂ.ಎಸ್. ಕದ್ದಿಮನಿ, ಪ್ರಧಾನ ಕಾರ್ಯದರ್ಶಿ ಆರ್‌.ಆರ್‌. ಪಾಟೀಲ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.