ADVERTISEMENT

ಕನ್ನಡದಲ್ಲಿ ಮಾತು: ಅತಿವೃಷ್ಟಿಗೆ ಪ್ಯಾಕೇಜ್‌ ನೀಡಲು ಸಂಸದ ಸಾಗರ್‌ ಖಂಡ್ರೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 9:21 IST
Last Updated 5 ಡಿಸೆಂಬರ್ 2025, 9:21 IST
ಸಾಗರ್‌ ಖಂಡ್ರೆ
ಸಾಗರ್‌ ಖಂಡ್ರೆ   

ನವದೆಹಲಿ: ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಸಲ ವ್ಯಾಪಕ ಹಾನಿಯಾಗಿದೆ. ಇದರಿಂದ ಭಾರಿ ನಷ್ಟ ಅನುಭವಿಸಿರುವ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಬೀದರ್ ಸಂಸದ ಸಾಗರ್ ಖಂಡ್ರೆ ಶುಕ್ರವಾರ ಆಗ್ರಹಿಸಿದರು. 

ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕನ್ನಡದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕೇಂದ್ರ ಸರ್ಕಾರದ ನಿಯಮದ ಪ್ರಕಾರ ನೀರಾವರಿ ಪ್ರದೇಶಕ್ಕೆ ಎಕರೆಗೆ ₹7 ಸಾವಿರ ಹಾಗೂ ನೀರಾವರಿ ಇಲ್ಲದ ಪ್ರದೇಶಕ್ಕೆ ಎಕರೆಗೆ ₹3.5 ಸಾವಿರ ಪರಿಹಾರ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲ ಆಗುತ್ತಿಲ್ಲ. ಈ ನಿಯಮವನ್ನು ಮರು ಪರಿಶೀಲಿಸಿ ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕು‘ ಎಂದು ಒತ್ತಾಯಿಸಿದರು. 

‘ಮಳೆ ಹಾನಿಯಿಂದ ನಲುಗಿರುವ ರೈತರಿಗೆ ಹೆಚ್ಚುವರಿ ಪರಿಹಾರ ನೀಡುವ ಮೂಲಕ ರಾಜ್ಯ ಸರ್ಕಾರ ನೆರವಿಗೆ ಧಾವಿಸಿದೆ. ಅದೇ ರೀತಿ, ಕೇಂದ್ರ ಸರ್ಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು‘ ಎಂದು ಅವರು ಮನವಿ ಮಾಡಿದರು. 

ADVERTISEMENT

ಫಸಲ್ ಬಿಮಾ ಯೋಜನೆಯಡಿ ರೈತರು ವಿಮೆ ಕಂತುಗಳನ್ನು ಸಕಾಲಕ್ಕೆ ತುಂಬಿದ್ದಾರೆ. ಆದರೆ, ವಿಮೆ ಸರಿಯಾಗಿ ಬರುತ್ತಿಲ್ಲ. ಈ ವಿಮೆಯನ್ನು ಸಕಾಲಕ್ಕೆ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು ಎಂದು ಅವರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.