ADVERTISEMENT

ಶಿವಲಿಂಗಪ್ಪ, ಆರ್‌. ದಿಲೀಪ್‌ಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:42 IST
Last Updated 18 ಜೂನ್ 2025, 15:42 IST
ಶಿವಲಿಂಗಪ್ಪ
ಶಿವಲಿಂಗಪ್ಪ   

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಯುವ ಪುರಸ್ಕಾರ’ವು ಯುವ ಲೇಖಕ ಆರ್.ದಿಲೀಪ್‌ ಕುಮಾರ್ ಅವರ ‘ಪಚ್ಚೆಯ ಜಗುಲಿ’ ವಿಮರ್ಶಾ ಸಂಕಲನಕ್ಕೆ ಹಾಗೂ ‘ಬಾಲ ಸಾಹಿತ್ಯ ಪುರಸ್ಕಾರ’ವು ಲೇಖಕ ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ ಬುಕ್‌’ ಮಕ್ಕಳ ಕತೆಗೆ ಲಭಿಸಿದೆ. 

ಪ್ರಶಸ್ತಿ ಪುರಸ್ಕೃತರು ತಲಾ ₹50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಚಾಮರಾಜನಗರದ ದಿಲೀಪ್ ಕುಮಾರ್ ಕವಿ, ವಿಮರ್ಶಕ ಹಾಗೂ ಸಂಶೋಧಕರು. ಅವರು ಜನಿಸಿದ್ದು 1991ರ ಮಾರ್ಚ್ 16ರಂದು. ಮಹಾಕವಿ ಪಂಪನ ಎರಡೂ ಮಹಾಕಾವ್ಯಗಳನ್ನು ಕುರಿತು ಅವರು ಸರಣಿ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ನಂತರ ಅವರು ವಚನ ಸಾಹಿತ್ಯ ಕುರಿತು ಬರೆದ ಲೇಖನಗಳನ್ನು 'ಶಬ್ದ ಸೋಪಾನ' ಹೆಸರಲ್ಲಿ ಪ್ರಕಟಿಸಿದ್ದಾರೆ. ‘ಹಾರುವ ಹಂಸೆ’ ಅವರ ಕವನ ಸಂಕಲನ. 

ADVERTISEMENT

ಶಿವಲಿಂಗಪ್ಪ ಹಂದಿಹಾಳು ಅವರು ಬಳ್ಳಾರಿ ಜಿಲ್ಲೆಯ ಹಂದಿಹಾಳು ಗ್ರಾಮದವರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. ‘ನಾನು ಮತ್ತು ಕನ್ನಡಕ’ (ಕವನ ಸಂಕಲನ), ‘ಎಳೆಬಿಸಿಲು’ (ಮಕ್ಕಳ ಸಾಹಿತ್ಯ ಸಂಪದ), ‘ಶಾವೋಲಿನ್’  (ಇಂಗ್ಲಿಷ್ ಮೂಲ ಮಕ್ಕಳ ಕತೆಗಳು), ‘ಆನಂದಾವಲೋಕನ’ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ‘ಬಳ್ಳಾರಿಯ ಬೆಡಗು’ (ಕಥಾ ಸಂಕಲನ), ‘ದಿ ಯಂಗ್ ಸೈಂಟಿಸ್ಟ್’ (ಮಕ್ಕಳ ಕಾದಂಬರಿ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ಕನ್ನಡ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಲೇಖಕರಾದ ಬಸು ಬೇವಿನಗಿಡದ, ಬೇಲೂರು ರಘುನಂದನ್‌ ಹಾಗೂ ಎಚ್‌.ಶಶಿಕಲಾ ತೀರ್ಪುಗಾರರಾಗಿದ್ದರು. ಯುವ ಪುರಸ್ಕಾರಕ್ಕೆ ಲೇಖಕರಾದ ಜಿ.ಎಂ. ಹೆಗಡೆ, ಪ್ರೊ.ವಿಕ್ರಂ ವಿಸಾಜಿ ಹಾಗೂ ವಿದ್ವಾಂಸ ಟಿ.ಪಿ. ಅಶೋಕ ತೀರ್ಪುಗಾರರಾಗಿದ್ದರು. 

ದಿಲೀಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.