ADVERTISEMENT

ಸಾಹಿತಿಗಳು ಭವಿಷ್ಯ ಮರೆತರೆ ದೊಡ್ಡ ವಂಚನೆ

ಇ.ಎಸ್.ಸುಧೀಂದ್ರ ಪ್ರಸಾದ್
Published 6 ಜನವರಿ 2019, 19:15 IST
Last Updated 6 ಜನವರಿ 2019, 19:15 IST
‘ಸಂಕೀರ್ಣ’ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಡಾ. ನಾ.ಸೋಮೇಶ್ವರ ಅವರನ್ನು ನಾಗೇಶ ಹೆಗಡೆ ಅಭಿನಂದಿಸಿದರು. ಡಾ. ಎಂ. ವೆಂಕಟಸ್ವಾಮಿ, ಎನ್‌.ಎ.ಎಂ.ಇಸ್ಮಾಯಿಲ್ ಇದ್ದಾರೆ– ಪ್ರಜಾವಾಣಿ ಚಿತ್ರ
‘ಸಂಕೀರ್ಣ’ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಡಾ. ನಾ.ಸೋಮೇಶ್ವರ ಅವರನ್ನು ನಾಗೇಶ ಹೆಗಡೆ ಅಭಿನಂದಿಸಿದರು. ಡಾ. ಎಂ. ವೆಂಕಟಸ್ವಾಮಿ, ಎನ್‌.ಎ.ಎಂ.ಇಸ್ಮಾಯಿಲ್ ಇದ್ದಾರೆ– ಪ್ರಜಾವಾಣಿ ಚಿತ್ರ   

ಶಂ.ಬಾ.ಜೋಶಿ ಮಹಾವೇದಿಕೆ (ಧಾರವಾಡ): ‘ನಿನ್ನೆ, ಮೊನ್ನೆ, ಕಳೆದ ಶತಮಾನಗಳ ಕುರಿತು ಮಾತನಾಡುತ್ತ, ಭವಿಷ್ಯವನ್ನು ಮರೆತರೆ ಅದು ಈ ಜಗತ್ತಿಗೆ ಮಾಡುವ ದೊಡ್ಡ ವಂಚನೆ’ ಎಂದು ಸಾಹಿತಿಗಳ ಕುರಿತು ಲೇಖಕ ಹಾಗೂ ‘ಪ್ರಜಾವಾಣಿ’ ಅಂಕಣಕಾರ ನಾಗೇಶ ಹೆಗಡೆ ಕಳವಳ ವ್ಯಕ್ತಪಡಿಸಿದರು.

ಭಾನುವಾರ ನಡೆದ ‘ಸಂಕೀರ್ಣ’ ಎಂಬ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಬಹಳಷ್ಟು ಸಾಹಿತ್ಯ ಗೋಷ್ಠಿಗಳು ಇತಿಹಾಸವನ್ನು ಮತ್ತೆಮತ್ತೆ ಪುನರಾವಲೋಕನೆ ಮಾಡುತ್ತವೆ. ತುಸುಮಟ್ಟಿಗೆ ವರ್ತಮಾನವನ್ನು ಚರ್ಚಿಸುತ್ತವೆ. ಸರ್ಕಾರ ಕೂಡ ಇದೇ ಪದ್ಧತಿಯನ್ನು ಅನುಸರಿಸುತ್ತಿವೆ. ಟಿಪ್ಪು ಏನು ಮಾಡಿದ? ಚಾಣಕ್ಯ ಏನು ನೀಡಿದ? ಮಹಾಭಾರತ ಏನು ಹೇಳಿತು? ಎಂಬುದರ ಕುರಿತು ಚರ್ಚಿಸುತ್ತಿವೆಯೇ ಹೊರತು, ಮುಂದಿನ 20 ವರ್ಷಗಳಲ್ಲಿ ದೇಶ ಏನೇನು ಅಭಿವೃದ್ಧಿ ಸಾಧಿಸಬೇಕು ಮತ್ತು ಬರಲಿರುವ ಅಪಾಯದಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಚಿಂತನೆಗಳೇ ಇಲ್ಲದಂತಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಂಥ ವಿಷಯಗಳ ಕುರಿತು ಸಾಹಿತಿಗಳು ಸದಾ ಕಣ್ಣು ತೆರೆದಿರಬೇಕು. ಶಿವರಾಮ ಕಾರಂತ, ಕೆ.ವಿ. ಪುಟ್ಟಪ್ಪ, ತೇಜಸ್ವಿ, ಅನಂತಮೂರ್ತಿ ಅವರಂಥ
ವರು ಸದಾ ಇಂಥ ವಿಷಯಗಳ ಕುರಿತು ಚರ್ಚಿಸಿ ವಿಶ್ವಮಾನವರಾಗಿ ಎಂಬ ಸಂದೇಶ ಸಾರುತ್ತಿದ್ದರು. ಆದರೆ ಇಂದು ಅಂಥವರು ಯಾರೂ ಕಾಣಿಸುತ್ತಿಲ್ಲ. ಜ್ಞಾನಪೀಠ ಪುರಸ್ಕೃತ ಅಮಿತಾವ್ ಘೋಷ್ ಅವರು ಜಾಗತಿಕ ತಾಪಮಾನ ಕುರಿತು ಕಾದಂಬರಿ ಬರೆದಿದ್ದಾರೆ. ಭವಿಷ್ಯದ ಕುರಿತು ಇತ್ತೀಚೆಗೆ ಪ್ರಕಟಗೊಂಡ ಏಕೈಕ ಕೃತಿ ಇದಾಗಿದೆ’ ಎಂದರು.

ADVERTISEMENT

‘ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಕೃಷಿಯಿಂದ ವಿಮುಖರಾಗಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಆದರೆ ಇದಕ್ಕೆ ನಗರ ಪ್ರದೇಶಗಳು ವ್ಯವಸ್ಥಿತವಾಗಿ ಸಜ್ಜಾಗುತ್ತಿಲ್ಲ. ಬೇಕಾಬಿಟ್ಟಿಯಾಗಿ ವಿಸ್ತರಣೆಯಾಗುತ್ತಲೇ ಇದೆ. ಈ ಅಪಾಯವೂ ಮುಂದೊಂದು ದಿನ ನಮ್ಮನ್ನು ಕಾಡಲಿದೆ. ಆದರೆ ಸರ್ಕಾರಗಳಿಗೆ ಅಭಿವೃದ್ಧಿ ಎಂದರೆ ಫ್ಲೈಓವರ್, ಕಾಂಕ್ರೀಟ್ ರಸ್ತೆ, ಸೇತುವೆಗಳೇ ಹೊರತು, ಶುದ್ಧ ನೀರು, ಗಾಳಿ, ಹಸಿರು, ಪ್ರಾಣಿಪಕ್ಷಿ ಒಳಗೊಂಡ ಪರಿಸರದ ಅಭಿವೃದ್ಧಿ ಅಲ್ಲ’ ಎಂದರು.

ಇದಕ್ಕೂ ಮೊದಲು ‘ವೈದ್ಯ ಸಾಹಿತ್ಯ’ ಕುರಿತು ಮಾತನಾಡಿದ ಡಾ. ನಾ. ಸೋಮೇಶ್ವರ, ‘ವೈದ್ಯಕೀಯ ಕಾಲೇಜು ಮತ್ತು ಡೊನೇಷನ್ ಕೊಟ್ಟು ಓದಿದ ವಿದ್ಯಾರ್ಥಿಗಳು, ಕಾರ್ಪೊರೇಟ್ ಆಸ್ಪತ್ರೆ, ಆರೋಗ್ಯ ವಿಮೆ, ಔಷಧ ಉದ್ಯಮ ಎಂಬ ನಾಲ್ಕು ಜಿಗಣೆಗಳು ಇಂದು ಆರೋಗ್ಯ ಕ್ಷೇತ್ರವನ್ನು ಹಾಳು ಮಾಡಿವೆ. ಆರೋಗ್ಯ ಶಿಕ್ಷಿತರಾಗದ ಹೊರತು ಇವುಗಳಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಇದಕ್ಕಿರುವ ಪರಿಹಾರವೆಂದರೆ ತಜ್ಞರು ಬರೆದ ಆರೋಗ್ಯ ಸಾಹಿತ್ಯವನ್ನು ಅಧ್ಯಯನ ಮಾಡುವ ಕಲೆಯನ್ನು ನಾವು ಅಭ್ಯಾಸ ಮಾಡಬೇಕು. ಅದರಿಂದ ಆಸ್ಪತ್ರೆಗೆ ಹೋಗುವ ಪ್ರಸಂಗ ಬಾರದಂತೆ ನಮ್ಮ ಜೀವನ ಶೈಲಿ ವೃದ್ಧಿಸಿಕೊಂಡು ನಾಳಿನ ಕರ್ನಾಟಕವನ್ನು ಕಟ್ಟಬೇಕು’ ಎಂದರು.

‘ಪ್ರಾಕೃತಿಕ ವಿಕೋಪ: ಎದುರಾಗಿರುವ ಹೊಸ ಸವಾಲು ಮತ್ತು ನಿರ್ವಹಣೆ’ ವಿಷಯ ಕುರಿತು ಮಾತನಾಡಿದ ಡಾ. ಎಂ. ವೆಂಕಟಸ್ವಾಮಿ,‘ಬೆಂಗಳೂರಿನಲ್ಲಿ 4.5ಲಕ್ಷ ಕೊಳವೆಬಾವಿ ನೀರನ್ನು ಶೇ 60ರಷ್ಟು ಜನ ಕುಡಿಯುತ್ತಿದ್ದಾರೆ. ಈ ನೀರು ನಗರದೊಳಗಿನ ಕೆರೆಗಳಿಂದ ಮರುಪೂರಣವಾಗುತ್ತಿದೆ. ಆದರೆ ಪ್ರತಿ ವರ್ಷ ಉತ್ಪತ್ತಿಯಾಗುವ 930ಟನ್ ಮಾನವ ತ್ಯಾಜ್ಯ ಕೂಡ ಈ ಕೆರೆಗಳಿಗೇ ಸೇರುತ್ತಿದೆ. ಇದರಿಂದ ಅನೇಕ ರೋಗರುಜಿನಗಳು ನಮ್ಮನ್ನು ಬಾಧಿಸುತ್ತಿವೆ. ಹೀಗಾದಲ್ಲಿ ನಾಳಿನ ಕರ್ನಾಟಕ ಕಟ್ಟಲು ಸಾಧ್ಯವಿಲ್ಲ. ಸರ್ಕಾರ ಎಚ್ಚೆತ್ತು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವ ಕಡೆ ಯೋಜನೆ ರೂಪಿ
ಸುವುದು ತುರ್ತು ಅಗತ್ಯವಿದೆ’ ಎಂದರು.

ಇಂದಿನ ವಾಸ್ತವ ಅರಿತು, ನಾಳಿನ ಭವಿಷ್ಯ ಕುರಿತು ಚಿಂತಿಸಿದಾಗ ಮಾತ್ರ ಸುಭದ್ರ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ
-ನಾಗೇಶ ಹೆಗಡೆ, ವಿಜ್ಞಾನ ಲೇಖಕ

ಸಾಮಾಜಿಕ ಜಾಲತಾಣ: ಅವಕಾಶಗಳು ಮತ್ತು ಸವಾಲುಗಳು’ ವಿಷಯವಾಗಿ ಮಾತನಾಡಿದ ‘ಪ್ರಜಾವಾಣಿ’ ಸಹಾಯಕ ಸಂಪಾದಕ ಎನ್‌.ಎ.ಎಂ.ಇಸ್ಮಾಯಿಲ್, ‘ಲಕ್ಷಗಟ್ಟಲೆ ಖಾತೆಗಳನ್ನು ಹೊಂದಿರುವ ಫೇಸ್‌ಬುಕ್, ಟ್ವಿಟರ್‌ಗಳಂಥ ಸಾಮಾಜಿಕ ಜಾಲತಾಣಗಳು ತಮ್ಮ ಛಾಪು ಕಳೆದುಕೊಳ್ಳುತ್ತಿವೆ. ಹೊಸ ತಾಣಗಳು ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಮಾಹಿತಿ ಯುಗದಲ್ಲಿ ಪುಸ್ತಕವನ್ನು ಹೊರತುಪಡಿಸಿ ಯಾವುದೂ ಶಾಶ್ವತವಾಗಿ ಉಳಿಯುತ್ತಿಲ್ಲ. ಹಾಗೆಯೇ ಮಾಹಿತಿಯನ್ನು ಎಷ್ಟೇ ಸುರಕ್ಷಿತವಾಗಿಟ್ಟರೂ, ಅದನ್ನು ಕದಿಯುವ ನೂತನ ತಂತ್ರಗಾರಿಕೆ ಹುಟ್ಟುಕೊಳ್ಳುತ್ತಿರುವುದೂ ಅಷ್ಟೇ ಸತ್ಯ’ ಎಂದರು.

ಮುಂದಿನ ಸಮ್ಮೇಳನ ಆನ್‌ಲೈನ್ ಆಗಬೇಕು

ಸಾಹಿತ್ಯ ಸಮ್ಮೇಳನದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಇಲ್ಲಿಗೆ ಬರಲು ಸಾಧ್ಯವಾಗದ ಅದೆಷ್ಟೋ ಕೇಳುವ ಮನಸ್ಸುಗಳು ಅಲ್ಲಿ ಪರಿತಪಿಸುತ್ತಿವೆ. ಇವರಿಗೆ ಗೋಷ್ಠಿಗಳನ್ನು ಆನ್‌ಲೈನ್ ಮೂಲಕ ತಲುಪಿಸುವ ವ್ಯವಸ್ಥೆ ಮುಂದಿನ ಸಮ್ಮೇಳನದಲ್ಲಾದರೂ ಜಾರಿಗೆ ಬರುವಂತಾಗಬೇಕು ಎಂದು ನಾಗೇಶ ಹೆಗಡೆ ಮತ್ತು ಇಸ್ಮಾಯಿಲ್ ಒತ್ತಾಯಿಸಿದರು.

ಅಗ್ನಿಶಾಮಕ ವ್ಯವಸ್ಥೆ ಇಲ್ಲ

‘ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಭವ್ಯ ಮಹಲು ಇದೆ. ಅದರೆ ಕಿಡಿ ಹೊತ್ತಿದರೆ ಆರಿಸಲು ಅಗ್ನಿಶಾಮಕ ಸಾಧನಗಳಿಲ್ಲ. ಪ್ರೇಕ್ಷಾಗೃಹಗಳಲ್ಲಿ ಹಳೆಯದಾದ ಅಗ್ನಿಶಾಮಕ ಸಾಧನ ಇದೆ. ಆದರೆ ಅದನ್ನು ಬಳಸುವುದು ಹೇಗೆ ಎಂಬುದು ಇಂಗ್ಲಿಷ್‌ನಲ್ಲಿದೆ. ಸುಳ್ವಾಡಿಯಲ್ಲಿ 17 ಜನರನ್ನು ಬಲಿ ತೆಗೆದುಕೊಂಡ ಮಾನೊಕ್ರೊಟೊಫಾಸ್‌ ಎಂಬ ರಾಸಾಯನಿಕ ಬಾಟಲಿಯ ಮೇಲೆ ಇದು ತಿನ್ನುವ ಆಹಾರದ ಮೇಲೆ ಸಿಂಪಡಿಸುವಂತಿಲ್ಲ ಎಂದು ಇಂಗ್ಲಿಷ್‌ನಲ್ಲಿ ಬರೆದಿದೆ. ನಮ್ಮ ಭಾಷೆಯಲ್ಲಿ ಇದು ಪ್ರಕಟಿಸದ ಕಾರಣ ಜನರು ಬೆಳೆ ಮಾತ್ರವಲ್ಲ ಮನುಷ್ಯರ ಮೇಲೂ ಸಿಂಪಡಿಸಿ ಕೊಲ್ಲುತ್ತಿದ್ದಾರೆ’ ಎಂದು ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.

ಕುಂಭ ಮೆರವಣಿಗೆಗೆ ಇಸ್ಮಾಯಿಲ್ ಪ್ರತಿಭಟನೆ

‘ದಾಸ್ಯ ಹಾಗೂ ಶೋಷಣೆಯ ಸಂಕೇತವಾದ ಪೂರ್ಣ ಕುಂಭ ಮೆರವಣಿಗೆಯು ಸಮಾನತೆಯ ಪ್ರತಿಪಾದಿಸುವ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಬಾರದಿತ್ತು. ಸಂಪ್ರದಾಯ ಹೆಸರಿನಲ್ಲಿ ನಡೆದ ಈ ಮೆರವಣಿಗೆಯನ್ನು ಆಯೋಜಕರು ಹಟ ಹೊತ್ತು ಮಾಡಿದ್ದನ್ನು ಸರ್ವಾಧ್ಯಕ್ಷರು ವಿರೋಧಿಸದ ನಡೆ ಕುರಿತು ವೈಯಕ್ತಿಕ ಪ್ರತಿಭಟನೆ ದಾಖಲಿಸುತ್ತೇನೆ‘ ಎಂದು ಎನ್‌.ಎ.ಎಂ.ಇಸ್ಮಾಯಿಲ್ ಹೇಳಿ ತಮ್ಮ ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.