ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ನೌಕರರು, ಅಧಿಕಾರಿಗಳು ವಿವಿಧ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ‘ಸಂಬಳ ಪ್ಯಾಕೇಜ್’ ಖಾತೆ ತೆರೆಯುವುದನ್ನು ಕಡ್ಡಾಯ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಸಂಬಳ ಪ್ಯಾಕೇಜ್‌ನ ಅಡಿಯಲ್ಲಿ ಖಾತೆ ಹೊಂದಿದ್ದರೆ ಅಂತಹ ನೌಕರರಿಗೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ವಸತಿ ಸಾಲ, ಉಚಿತ ರುಪೇ ಡೆಬಿಟ್–ಕ್ರೆಡಿಟ್ ಕಾರ್ಡ್, ಉಚಿತ ಡಿಮ್ಯಾಂಡ್ ಡ್ರಾಫ್ಟ್, ರಿಯಾಯತಿ ದರದಲ್ಲಿ ಲಾಕರ್ ಸೇವೆ ಒದಗಿಸುತ್ತಿವೆ. ಈ ಅನುಕೂಲಗಳನ್ನು ಸರ್ಕಾರಿ ನೌಕರರು ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದರೂ ಅನೇಕರು ಖಾತೆ ಆರಂಭಿಸದಿರುವುದು ಗಮನಕ್ಕೆ ಬಂದಿದೆ ಎಂದು ಇಲಾಖೆ ತಿಳಿಸಿದೆ.
ಜತೆಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಟರ್ಮ್ ಇನ್ಸುರೆನ್ಸ್), ₹456ಕ್ಕೆ ₹2 ಲಕ್ಷ ಮೊತ್ತದ ಅಪಘಾತ ವಿಮೆ ಒದಗಿಸುತ್ತಿದೆ. ಇನ್ನಷ್ಟು ಅನುಕೂಲಗಳು ಈ ಖಾತೆಗಳಿಗೆ ಲಭ್ಯವಿದೆ. ಹೀಗಾಗಿ ಎಲ್ಲ ನೌಕರರು ಮೂರು ತಿಂಗಳ ಒಳಗೆ ಸಂಬಳ ಪ್ಯಾಕೇಜ್ ಖಾತೆ ತೆರೆಯಬೇಕು ಎಂದು ಸೂಚಿಸಿದೆ.
‘ಎಲ್ಲ ನೌಕರರು ಈ ಸ್ವರೂಪದ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಖಾತೆ ಆಯ್ಕೆ ಮಾಡಿಕೊಳ್ಳುವಂತೆ ಕ್ರಮವಹಿಸುವುದು ಆಯಾ ಇಲಾಖೆಯ ಮುಖ್ಯಸ್ಥರ ಹೊಣೆಗಾರಿಕೆ ಆಗಿರುತ್ತದೆ. ಈ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಮತ್ತು ನೌಕರರನ್ನು ಪ್ರೋತ್ಸಾಹಿಸಬೇಕು’ ಎಂದು ಆರ್ಥಿಕ ಇಲಾಖೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.