ADVERTISEMENT

ಗೆದ್ದಿದ್ದೇವೆ ಎಂದು ಬೀಗುವುದಿಲ್ಲ: ಸಲೀಂ ಅಹಮದ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 15:51 IST
Last Updated 12 ಜುಲೈ 2023, 15:51 IST
ಸಲೀಂ ಅಹಮದ್
ಸಲೀಂ ಅಹಮದ್   

ಬೆಂಗಳೂರು: ‘ನಾವು ಗೆದ್ದಿದ್ದೇವೆ ಎಂದು ಬೀಗುವುದಿಲ್ಲ. ಜನರ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ’ ಎಂದು ಕಾಂಗ್ರೆಸ್ಸಿನ ಸಲೀಂ ಅಹ್ಮದ್ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಬಿಜೆಪಿ ವಿರುದ್ಧ ಜನಾದೇಶ ಬಂದಿದೆ. ಭ್ರಷ್ಟಾಚಾರವೇ ಸೋಲಿಗೆ ಕಾರಣ. ಶೇ 40 ಕಮಿಷನ್ ಸರ್ಕಾರವನ್ನು ಜನ ಕಿತ್ತು ಹಾಕಿದ್ದಾರೆ’ ಎಂದರು, ‘ನಾವು ಘೋಷಿಸಿದ್ದ ಅನ್ನ‌ಭಾಗ್ಯ ಯೋಜನೆಗೆ ಅಕ್ಕಿ ನೀಡದೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ನಾವು ಕೊಳ್ಳುತ್ತೇವೆ ಎಂದರೂ ಅಕ್ಕಿ ಕೊಡುತ್ತಿಲ್ಲ’ ಎಂದು ಟೀಕಿಸಿದರು.

ಸಲೀಂ ಮಾತಿಗೆ ಕೆರಳಿದ ಬಿಜೆಪಿ ಸದಸ್ಯರು, ‘ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದ ಬಳಕೆಗೆ ಅಕ್ಕಿ ಸಂಗ್ರಹಿಸಿಡಲಾಗಿದೆ. ಸುಳ್ಳು ಆರೋಪ ಸರಿಯಲ್ಲ’ ಎಂದರು. ಬಿಜೆಪಿ ಸದಸ್ಯರ ಆಕ್ರೋಶದ ನಡುವೆಯೇ ಮಾತು ಮುಂದುವರಿಸಿದ ಸಲೀಂ, ‘ಜನರಿಗೆ ಮನ್ ಕಿ ಬಾತ್ ಬೇಕಿಲ್ಲ. ಕಾಮ್ ಕಿ ಬಾತ್ ಬೇಕಿದೆ. ಕೇಂದ್ರದಿಂದ ಆಗಿರುವ ಅನ್ಯಾಯವನ್ನು ನಾವು ಜನರ ಮುಂದೆ ಕೊಂಡೊಯ್ಯುತ್ತೇವೆ’ ಎಂದರು.

ADVERTISEMENT

ಬಿಜೆಪಿಯ ಕೇಶವಪ್ರಸಾದ್, ‘ರಾಜ್ಯಪಾಲರ ಮೂಲಕ ಸರ್ಕಾರ ಮಾಡಿದ ಭಾಷಣ ಮುಂದಿನ ದಿಕ್ಸೂಚಿ ಆಗಲಿದೆ ಎಂದು ನಾವು ಭಾವಿಸಿದ್ದೆವು. ಅದು ಆಗಿಲ್ಲ. ಕೇವಲ ಐದು ಭಾಗ್ಯಗಳ ಮಧ್ಯೆ ಸರ್ಕಾರ ಗಿರಕಿ ಹೊಡೆಯುತ್ತಿದೆ’ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಮತ್ತು ಇಂದಿರಾಗಾಂಧಿ  ಹೆಸರು ಪ್ರಸ್ತಾಪಿಸದೇ ಕಾಂಗ್ರೆಸ್ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡಾಗ, ಕಾಂಗ್ರೆಸ್ ಸದಸ್ಯರು ಸಿಡಿಮಿಡಿಗೊಂಡರು.

‘ಶಕ್ತಿ’ ಬಂದ ನಂತರ  ಆದಾಯ ವೃದ್ಧಿಸಿದೆ: ‘ಶಕ್ತಿ’ ಯೋಜನೆಯಿಂದ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಮೌನ ಕ್ರಾಂತಿ ಆಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ಸಾರಿಗೆ ಬಸ್‌ಗಳಲ್ಲಿ ಶೇ‌ 20ರಿಂದ 30ರಷ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಬಂದಿದೆ. ಈ ಮೂಲಕ, ಸಾರಿಗೆ ನಿಗಮ ಸ್ವಾವಲಂಬಿಯಾಗುತ್ತದೆ. ನಾಲ್ಕೂ ನಿಗಮಗಳು ಲಾಭಕ್ಕೆ ಬಂದಿವೆ. ಇದರಿಂದ ಶಕ್ತಿ ಯೋಜನೆ ನಷ್ಟವಲ್ಲ, ಲಾಭಕ್ಕೆ ಬಂದಿದೆ’ ಎಂದರು.

‘ಶ್ರೀಮಂತರ ಸಾಲ ಮನ್ನಾ ಮಾಡಿದರೆ ಸರಿ, ಬಡವರಿಗೆ ಅನ್ನ ಕೊಟ್ಟರೆ ಅದಕ್ಕೆ ಆಕ್ರೋಶ. ಬಡವರ ಬಗ್ಗೆ ಯಾಕೆ ಸಿಟ್ಟು’ ಎಂದು ಅವರು ಪ್ರಶ್ನಿಸಿದಾಗ, ಬಿಜೆಪಿಯ ಭಾರತಿ ಶೆಟ್ಟಿ ಮತ್ತು ಇತರೆ ಸದಸ್ಯರು ಆಕ್ಷೇಪಿಸಿದರು. ಆಗ ತೀವ್ರ ವಾಗ್ವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.