ADVERTISEMENT

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾವಾದಿ: ನಳಿನ್‌ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 28 ಮೇ 2022, 10:42 IST
Last Updated 28 ಮೇ 2022, 10:42 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್   

ಮಂಗಳೂರು: ‘ನೆಹರೂ ಸಂತತಿಯವರ ಬಳಿ ಭಿಕ್ಷಾಟನೆ ಮಾಡಿ ಅಧಿಕಾರ ಗಳಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖ್ಯಮಂತ್ರಿ ಆಗುವ ಹುಚ್ಚು ಆಸೆ ಶುರುವಾಗಿದೆ. ಅದಕ್ಕಾಗಿ ಬೇಕಾಬಿಟ್ಟಿ ಮಾತನಾಡಿ ವೈಷಮ್ಯ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ದೇಶ ಕಟ್ಟುವ ಕೆಲಸ ಮಾಡುತ್ತಿರುವ ಆರ್‌ಎಸ್‍ಎಸ್ ಬಗ್ಗೆ ಅವರಿಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನೆಹರೂ ಸಂತಾನ ದೇಶವನ್ನು ನಾಶ ಮಾಡಿದರೆ, ಆರ್‌ಎಸ್‌ಎಸ್ ದೇಶವನ್ನು ಉದ್ಧಾರ ಮಾಡಿದೆ. ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯಗೆ ಮತಿಭ್ರಮಣೆ
ಆಗಿದೆ. ಅಧಿಕಾರದ ಹುಚ್ಚಿನಲ್ಲಿ ಇತಿಹಾಸ, ಭಾರತೀಯತೆ ಎಲ್ಲವನ್ನೂ ಮರೆತಿದ್ದಾರೆ. ಸಮಾಜವಾದದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಬಳಿಕ ಮಜಾವಾದಿಯಾಗಿ ಪರಿವರ್ತನೆಯಾಗಿದ್ದಾರೆ. ಸಮಾಜವನ್ನು ಒಡೆಯುವ, ಜಾತಿ ಸಂಘರ್ಷ, ಗಲಭೆ ಸೃಷ್ಟಿಸುವ ಮನಸ್ಸುಗಳೊಂದಿಗೆ ಕೈಜೋಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಅವನತಿಯ ಅಂಚಿನಲ್ಲಿದೆ. ಒಂದು ವರ್ಷದಲ್ಲಿ ಕಾಂಗ್ರೆಸ್‍ನ ಪ್ರಮುಖ 66 ಮುಖಂಡರು ಪಕ್ಷ ತೊರೆದಿದ್ದಾರೆ. ಕಪಿಲ್ ಸಿಬಾಲ್‍ ಅಂತಹವರೂ ಕಾಂಗ್ರೆಸ್ ಬಿಟ್ಟಿದ್ದಾರೆ. ರಾಜ್ಯದಲ್ಲೂ ಇಂತಹ ನಾಯಕರು ಕಾಂಗ್ರೆಸ್ ತೊರೆಯಲಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತ ನಡೆಸಲಿದ್ದು, ಕಾಂಗ್ರೆಸ್ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.