ADVERTISEMENT

ಗೌರಿ ಹತ್ಯೆ ಆರೋಪಿ ಋಷಿಕೇಶ್‌ ನಮ್ಮ ಸಂಘಟನೆ ಸದಸ್ಯನಾಗಿದ್ದ: ಸನಾತನ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 14:02 IST
Last Updated 12 ಜನವರಿ 2020, 14:02 IST
ಗೌರಿ ಲಂಕೇಶ್‌ ಹಾಗೂ ಹತ್ಯೆ ಆರೋಪಿ ಋಷಿಕೇಶ್‌ ದೇವಾಡಿಕರ್‌
ಗೌರಿ ಲಂಕೇಶ್‌ ಹಾಗೂ ಹತ್ಯೆ ಆರೋಪಿ ಋಷಿಕೇಶ್‌ ದೇವಾಡಿಕರ್‌   

ಮುಂಬೈ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ವಿಶೇಷ ತನಿಖಾ ದಳದ ಪೊಲೀಸರು ಬಂಧಿಸಿರುವ ಋಷಿಕೇಶ್‌ ದೇವಾಡಿಕರ್‌ ತಮ್ಮ ಸಂಘಟನೆಯ ಸದಸ್ಯ ಎಂದು ಬಲಪಂಥೀಯ ಸನಾತನ ಸಂಸ್ಥೆ ಒಪ್ಪಿಕೊಂಡಿದೆ. ಆದರೆ, ಅವನು ಸುಮಾರು 10 ವರ್ಷಗಳಿಂದ ಸಂಸ್ಥೆಯಲ್ಲಿ ಸಕ್ರಿಯನಾಗಿಲ್ಲ ಎಂದು ಹೇಳಿದೆ.

‘ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಋಷಿಕೇಶ್‌ನನ್ನು ಪೊಲೀಸರು ಬಂಧಿಸಿದ ನಂತರ ನಮಗೆ ಆತನ ವಿಷಯ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಿದ್ದೇವೆ’ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್‌ ರಾಜಹನ್ಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಋಷಿಕೇಶ್‌ನು ಕೆಲವು ವರ್ಷಗಳ ಹಿಂದೆ ನಮ್ಮ ಸಂಘಟನೆಯಲ್ಲಿದ್ದ. ಕಳೆದ 8–10 ವರ್ಷಗಳಿಂದ ಸಕ್ರಿಯನಾಗಿರಲಿಲ್ಲ. ಬೇರೆ ಸಂಘಟನೆಗಳೊಂದಿಗೆ ಆತ ಚಟುವಟಿಕೆಗಳಲ್ಲಿ ತೊಡಗಿದ್ದ ಎಂಬುದು ನಮಗೆ ಮಾಹಿತಿ ಬಂದಿತ್ತು. ಆದರೆ, ನಮ್ಮ ಸಂಘಟನೆಯಿಂದ ಬಹಳ ವರ್ಷಗಳಿಂದ ದೂರ ಉಳಿದು, ಈಗ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದಾಗ ಸನಾತನ ಸಂಸ್ಥೆಯನ್ನು ದೂಷಿಸುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಸನಾತನ ಸಂಸ್ಥೆಯು ಆಧ್ಯಾತ್ಮಿಕತೆಯನ್ನು ಹರಡುವ ಕೆಲಸ ಮಾಡುತ್ತದೆ’ ಎಂದು ತಿಳಿಸಿರುವ ಅವರು, ‘ಯಾವುದೇ ಕೊಲೆಯ ಪ್ರಕರಣಕ್ಕೂ ಮತ್ತು ಸಂಸ್ಥೆಗೂ ಸಂಬಂಧವಿಲ್ಲ’ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.