
ಬೆಂಗಳೂರು: ‘ದೇವಾಲಯಗಳು ತಮ್ಮ ಧಾರ್ಮಿಕ ಕೈಂಕರ್ಯಗಳಿಗೆ ಅಗತ್ಯವಿರುವ ಶ್ರೀಗಂಧವನ್ನು ತಾವೇ ಬೆಳೆದುಕೊಳ್ಳಬಹುದೇ ಎಂಬುದರ ಬಗ್ಗೆ ಪರಿಶೀಲಿಸಿ’ ಎಂದು ಹೈಕೋರ್ಟ್, ರಾಜ್ಯ ಅರಣ್ಯ ಇಲಾಖೆಗೆ ನಿರ್ದೆಶಿಸಿದೆ.
ಮಠಕ್ಕೆ ಅಗತ್ಯವಿರುವ ಶ್ರೀಗಂಧ ಪೂರೈಕೆ ಮಾಡದ ಉಡುಪಿ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಉಡುಪಿ ‘ಶ್ರೀ ಕೃಷ್ಣ ಮಠ’ದ ಪರ್ಯಾಯ ಸ್ವಾಮೀಜಿ ರಿಟ್ ಅರ್ಜಿ ಸಲ್ಲಿಸಿದ್ದರು. ಅದನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಶ್ರೀಗಂಧದ ಪೂರೈಕೆ ಪ್ರಮಾಣದಲ್ಲಿ ಕೊರತೆ ಉಂಟಾಗಿರುವ ಕಾರಣ ಶ್ರೀ ಮಠವು ತನಗೆ ಅಗತ್ಯವಿರುವ ಶ್ರೀಗಂಧವನ್ನು ತಾನೇ ಸ್ವತಃ ಬೆಳೆಯುವುದಕ್ಕೆ ಅವಕಾಶ ಕಲ್ಪಿಸಬಹುದೇ ಎಂಬ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಬಹುದಾಗಿದೆ’ ಎಂದೂ ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪುತ್ತಿಗೆ ಆರ್.ರಮೇಶ್ ಅವರ ವಾದವನ್ನು ನ್ಯಾಯಪೀಠ ಆಲಿಸಿತು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವ ನ್ಯಾಯಪೀಠ, 10 ಕೆ.ಜಿ. ಶ್ರೀಗಂಧಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಶ್ರೀ ಮಠಕ್ಕೆ ಅವಕಾಶ ಕಲ್ಪಿಸಿದೆ. ‘ಶ್ರೀ ಮಠ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ 10 ಕೆ.ಜಿ. ಶ್ರೀಗಂಧವನ್ನು ಪೂರೈಸಬೇಕು’ ಎಂದು ತಿಳಿಸಿದೆ.
ಪ್ರಕರಣವೇನು?:
ಉಡುಪಿ ಶ್ರೀ ಕೃಷ್ಣ ಮಠದ ಪೂಜಾ ಕೈಂಕರ್ಯಕ್ಕೆ ಸರ್ಕಾರ ಹಲವು ವರ್ಷಗಳಿಂದ 1,087 ಕೆ.ಜಿ ಶ್ರೀಗಂಧ ಒದಗಿಸುತ್ತಿತ್ತು. ಆದರೆ, 2004-05ನೇ ಸಾಲಿನಲ್ಲಿ 1,087 ಶ್ರೀಗಂಧ ನೀಡುವ ಸಂಬಂಧ ಚಲನ್ ಸಿದ್ಧಪಡಿಸಿದ್ದರೂ 239 ಕೆ.ಜಿ ಮಾತ್ರ ನೀಡಲಾಗಿತ್ತು. ಬಳಿಕ 2007ರಲ್ಲಿ 100 ಕೆ.ಜಿ. ಶ್ರೀಗಂಧ ನೀಡಲಾಗಿತ್ತು. ಇನ್ನುಳಿದ ಪ್ರಮಾಣವನ್ನು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ 2007ರಲ್ಲಿ ಶ್ರೀ ಮಠ
ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಏತನ್ಮಧ್ಯೆ, ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅಲ್ಪ ಪ್ರಮಾಣದ ಶ್ರೀ ಗಂಧವನ್ನು ಮಂಜೂರು ಮಾಡಲಾಗಿತ್ತು. ಹಾಗಾಗಿ, ಅರ್ಜಿದಾರರು ತಮ್ಮ ಅರ್ಜಿ ಹಿಂಪಡೆದಿದ್ದರು.
ನಂತರ 2009 ಮತ್ತು 2010ರಲ್ಲಿ ಶ್ರೀಗಂಧ ಬಿಡುಗಡೆಗೆ ಕೋರಲಾಗಿತ್ತು. ಆದರೆ, ದೇವಾಲಯವನ್ನು ಮುಜರಾಯಿ ಇಲಾಖೆಯಿಂದ ಕೈಬಿಡಲಾಗಿತ್ತು. ಅಂತೆಯೇ, 2011ರಲ್ಲಿ ಶ್ರೀಗಂಧ ಒದಗಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನೂ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಶ್ರೀಮಠ ಪುನಃ ಹೈಕೋರ್ಟ್ ಮೆಟ್ಟಿಲೇರಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.