ADVERTISEMENT

ರಾಯಣ್ಣ ಪ್ರತಿಮೆ ಹಾಳುಗೆಡವಿದವರ ವಿರುದ್ಧ ಕ್ರಮ: ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:45 IST
Last Updated 19 ಡಿಸೆಂಬರ್ 2021, 19:45 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಶಿವಮೊಗ್ಗ: ‘ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಕೆಲವರು ಗೊಂದಲ, ಗಲಭೆ ಸೃಷ್ಟಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಳು ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅಪರಾಧಿಗಳು ಯಾರೇ ಇರಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮರ ಪ್ರತಿಮೆ ವಿಚಾರವಾಗಿ ವಿಧಾನ ಮಂಡಲದಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ಮಾಡುತ್ತೇವೆ. ಈ ರೀತಿ ಘಟನೆಗಳು ಮರುಕಳಿಸದಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಘಟನೆ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಠಿಣ ಕ್ರಮ ಜರುಗಿಸುವಂತೆ ಗೃಹ ಸಚಿವರಿಗೆ ಸೂಚಿಸಿದ್ದಾರೆ. ಗಲಭೆಗೆ ಸಂಬಂಧಿಸಿ ಈಗಾಗಲೇ 23 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಘಟನೆಯಲ್ಲಿ ಇನ್ನೂ ಯಾರು ಯಾರು ಶಾಮೀಲಾಗಿದ್ದಾರೆಯೋ ಅವರನ್ನು ಬಂಧಿಸುವ ಕೆಲಸ ಮುಂದುವರಿಯುತ್ತದೆ’ ಎಂದರು.

ಎಂಇಎಸ್ ಈ ಮಟ್ಟಿಗೆ ಬೆಳೆಯಲು ಹಿಂದೆ ಬಿಜೆಪಿ ನೀಡಿದ್ದ ಬೆಂಬಲವೇ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಸ್‌ವೈ, ‘ಯಾರೋ ಕೆಲವರು ವಾಸ್ತವಿಕ ಸಂಗತಿ ತಿಳಿಯದವರು ಮಾಡಿದ ಆರೋಪಕ್ಕೆ ಅರ್ಥವಿಲ್ಲ. ಯಾರೇ ಅಪರಾಧ ಮಾಡಿದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಿ ಜೈಲಿಗೆ ಕಳುಹಿಸಿರುವುದೇ ಇದಕ್ಕೆ ಉದಾಹರಣೆ’ ಎಂದು ಹೇಳಿದರು.

ADVERTISEMENT

‘ಕನ್ನಡಪರ ಹೋರಾಟಗಾರರ ಮೇಲೆ ಪ್ರತಾಪ ಬೇಡ’
ಬೆಂಗಳೂರು:
‘ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ’ ಎಂದು ಕಿಡಿಕಾರಿದ್ದಾರೆ.

‘ಶಿವಾಜಿ ಪ್ರತಿಮೆ ವಿರೂಪ ಮಾಡಿದ ವಿಷಯವನ್ನು ಪ್ರಸ್ತಾಪ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅನಗತ್ಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿಯಲ್ಲಿದ್ದು ಒಕ್ಕೂಟ ವ್ಯವಸ್ಥೆ ಆಶಯವನ್ನು ಗಾಳಿಗೆ ತೂರುವ ಉದ್ಧಟತನದ ಮಾತೇಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

**
ಕಲ್ಲುತೂರಾಟ: ಐವರ ಬಂಧನ
ಬೆಳಗಾವಿ:
ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದ ಕಲ್ಲುತೂರಾಟ ಪ್ರಕರಣ ಸಂಬಂಧ ಮಾರ್ಕೆಟ್‌ ಠಾಣೆ ಪೊಲೀಸರು ಭಾನುವಾರ ಐವರನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 32ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.