ADVERTISEMENT

ಬಂಡೀಪುರ ಹೆದ್ದಾರಿ: ‘ಪರ್ಯಾಯ ರಸ್ತೆ ಇದ್ದರೂ ತಗಾದೆ’

ಕೇರಳ ನಿಲುವಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:32 IST
Last Updated 29 ಸೆಪ್ಟೆಂಬರ್ 2019, 19:32 IST
ಸಂಜಯ್‌ ಗುಬ್ಬಿ
ಸಂಜಯ್‌ ಗುಬ್ಬಿ   

ಬೆಂಗಳೂರು: ಕರ್ನಾಟಕದಿಂದ ಕೇರಳಕ್ಕೆ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿದ್ದರೂ, ಬಂಡೀ‍ಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ತೆರವಿಗೆ ಕೇರಳದವರು ಒತ್ತಾಯಿಸುವುದು ಏಕೆ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಪ್ರಶ್ನಿಸಿದ್ದಾರೆ.

‘ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿದರೆ ಬಂಡೀಪುರದ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಕ್ಕೆ ವಿರೋಧವಿಲ್ಲ ಎಂದು ಕೇರಳ ಸರ್ಕಾರವು ರಾಜ್ಯದ ಹೈಕೋರ್ಟ್‌ನಲ್ಲಿ ಹೇಳಿತ್ತು. ಅದರಂತೆ 10 ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರವು ಕೇರಳ ಸಂಪರ್ಕಕ್ಕೆ ಹುಣಸೂರು– ಗೋಣಿ ಕೊಪ್ಪಲು– ವಯನಾಡು ವಾರ್ಗವನ್ನು ₹ 75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ’ ಎಂದು ತಿಳಿಸಿದರು.

‘ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಹೆದ್ದಾರಿಯಲ್ಲಿ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ರಾತ್ರಿ ಹೊತ್ತು ವಾಹನ ಸಂಚಾರ ನಿರ್ಬಂಧಿಸಬೇಕು ಎಂದು ನ್ಯಾಯಾಲಯವೇ ಆದೇಶಿಸಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಗಳು ಮತ್ತು ಕೇಂದ್ರದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ಸೇರಿ ಎಲ್ಲಾ ಪಕ್ಷಗಳ ಸರ್ಕಾರಗಳೂ ಬೆಂಬಲಿಸಿವೆ’ ಎಂದರು.

ADVERTISEMENT

‘ರಾತ್ರಿ ವಾಹನ ಸಂಚಾರ ನಿರ್ಬಂಧವನ್ನು ವಿರೋಧಿಸುತ್ತಿರುವುದು ಮರಳು ಕಳ್ಳಸಾಗಣೆದಾರರು, ಖಾಸಗಿ ಬಸ್‌ಗಳಲ್ಲಿ ತೆರಿಗೆ ವಂಚಿಸಿ ಸರಕು ಸಾಗಿಸುವವರು, ಕಾನೂನುಬಾಹಿರವಾಗಿ ಜಾನುವಾರು ಸಾಗಿಸುವವರು ಹಾಗೂ ಕೇರಳದಿಂದ ನಮ್ಮ ರಾಜ್ಯಕ್ಕೆ ಆಸ್ಪತ್ರೆ ಕಸವೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳನ್ನು ಹರಡುವ ಹೊಲಸನ್ನು ತಂದು ಸುರಿಯುವವರ ದುಷ್ಟಕೂಟಗಳು. ಇವರನ್ನು ಬೆಂಬಲಿಸುತ್ತಿರುವುದಾದರೂ ಏಕೆ’ ಎಂದು ಅವರು ಟೀಕಿಸಿದ್ದಾರೆ.

‘ತುರ್ತು ವಾಹನಗಳಿಗೆ ಮುಕ್ತ ಸಂಚಾರ, ನಿರ್ಬಂಧದ ವೇಳೆ ಎಂಟು ಸರ್ಕಾರಿ ಬಸ್‌ಗಳಿಗೆ ಅನುಮತಿ ನೀಡಿದ ಬಳಿಕವೂ ರಾತ್ರಿ ವಾಹನ ಸಂಚಾರ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುವ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದ್ದಾರೆ.

*‘ಈಗ ಕೇರಳವು ತನ್ನ ಹಿಂದಿನ ಹೇಳಿಕೆಗೆ ವ್ಯತಿರಿಕ್ತವಾಗಿ ತಗಾದೆ ತೆಗೆಯುತ್ತಿರುವುದು ಅದರ ಗುಪ್ತ ಕಾರ್ಯಸೂಚಿಯನ್ನು ಎತ್ತಿ ತೋರುತ್ತದೆ’ ಎಂದು ಗುಬ್ಬಿ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.