ADVERTISEMENT

ರಾಮರಾಜ್ಯಕ್ಕಾಗಿ ‘ಸಂಕಲ್ಪ ಅಭಿಯಾನ’: ಪೇಜಾವರಶ್ರೀ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 21:56 IST
Last Updated 25 ಜನವರಿ 2023, 21:56 IST
   

ಬೆಂಗಳೂರು: ‘ರಾಮಮಂದಿರ ನಿರ್ಮಾಣವಾದ ಮೇಲೆ ರಾಮರಾಜ್ಯವಾಗಬೇಕು. ಪ್ರತಿಯೊಬ್ಬ ನಾಗರಿಕರೂ ರಾಮನಾಗಬೇಕು. ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಇದಕ್ಕಾಗಿ ‘ಸಂಕಲ್ಪ ಅಭಿಯಾನ’ ಆರಂಭಿಸಲಾಗುತ್ತದೆ’ ಎಂದು ಅಯೋಧ್ಯೆ ರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿ ಸದಸ್ಯರಾದ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಸಂಕಲ್ಪ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಚಾಲನೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ’ ಎಂದರು.

‘ಅಯೋಧ್ಯೆಯಲ್ಲಿ ಮುಂದಿನ ಸಂಕ್ರಾಂತಿ ನಂತರ ರಾಮಮಂದಿರ ನಿರ್ಮಾಣದ ಮೊದಲ ಹಂತ ಪೂರ್ಣಗೊಂಡು, ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಮಂದಿರ ನಿರ್ಮಾಣವಾದ ಮೇಲೆ ಮುಂದೇನು’ ಎಂಬ ಪ್ರಶ್ನೆಗೆ, ‘ರಾಮರಾಜ್ಯದ ಸಂಕಲ್ಪ ಅಭಿಯಾನ’ವೇ ಉತ್ತರ. ರಾಮಮಂದಿರಕ್ಕೆ ಬಂದು ಕಾಣಿಕೆ ಸಲ್ಲಿಸುವ ಬದಲು ರಾಮನ ಹೆಸರಿನಲ್ಲಿ ಜನರಿಗೆ ಸೇವೆ ಮಾಡಬೇಕು. ಅದನ್ನು ಸಂಕಲ್ಪದಂತೆ ಮಾಡಬೇಕು’ ಎಂದರು.

ADVERTISEMENT

‘ರಾಮಭಕ್ತಿಯೇ ದೇಶ ಭಕ್ತಿ, ರಾಮಸೇವೆಯೇ ದೇಶಸೇವೆ. ರಾಮ ತೋರಿದ ದಿಕ್ಕಿನಲ್ಲಿ ನಾಗರಿಕರು ಸಾಗಿ, ಸೇವೆ ಮಾಡಿದರೆ ರಾಮರಾಜ್ಯ ನಿರ್ಮಾಣವಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಸೇವೆ ಮಾಡಲು ಜನರನ್ನು ಕೇಳಿಕೊಳ್ಳುತ್ತೇವೆ’ ಎಂದರು.

‘ಬೇರೆಯವರಿಗೆ ಸಣ್ಣ ಸಂತೋಷ ಉಂಟುಮಾಡುವುದು ಕೂಡ ಸೇವೆಯಂತೆಯೇ. ಹೀಗಾಗಿ ವೃದ್ಧರಿಗೆ, ಅನಾಥರಿಗೆ, ವಿದ್ಯಾರ್ಥಿಗಳಿಗೆ ಕೈಲಾದಷ್ಟು ಸಹಾಯ ಮಾಡಿದರೆ ಅದು ರಾಮಸೇವೆಯಾಗುತ್ತದೆ. ವೈದ್ಯ, ವಕೀಲ, ಶಿಕ್ಷಕ ಸೇರಿ ವೃತ್ತಿಯಲ್ಲಿರುವವರು ತಲಾ 10 ಜನರಿಗೆ ಉಚಿತ ಸೇವೆ ನೀಡಬಹುದು. ಉದ್ಯಮಿಗಳು ಮನೆ ಕಟ್ಟಿಕೊಡಬಹುದು. ಒಳ್ಳೆಯ ಕೆಲಸ ಮಾಡಿ, ಅದನ್ನು ರಾಮನಿಗೆ ಸಮರ್ಪಣೆ ಮಾಡಬೇಕು’ ಎಂದರು.

‘ತಮ್ಮ ತಂದೆ–ತಾಯಿಯರನ್ನು ನೆಮ್ಮದಿಯಾಗಿ ನೋಡಿಕೊಳ್ಳುವುದೂ ಸೇವೆಯೇ. ಅವರವರಿಗೆ ಇಷ್ಟವಾದ ಸೇವೆಯನ್ನು ರಾಮ ಹೆಸರಿನಲ್ಲಿ ಮಾಡಬೇಕು. ಈ ಮೂಲಕ ರಾಮರಾಜ್ಯ ನಿರ್ಮಾಣ ಸಾಧ್ಯವಾಗುತ್ತದೆ’ ಎಂದರು.

‘ರಾಮನಿಗೆ ಸಮರ್ಪಣೆ ಮಾಡುವ ಈ ಸೇವೆಯನ್ನು ‘ಸಂಕಲ್ಪ ಅಭಿಯಾನ’ ಎಂದು ಕರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಇದಕ್ಕೊಂದು ಆ್ಯಪ್‌ ಮಾಡಿ, ಜನರು ತಾವು ಮಾಡಿದ ಸೇವೆಗಳನ್ನು ಅಪ್‌ಲೋಡ್‌ ಮಾಡುವಂತೆ ವ್ಯವಸ್ಥೆಯನ್ನೂ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.