ADVERTISEMENT

‘ಎಲ್ಲವನ್ನೂ ಒಳಗೊಳ್ಳುವುದೇ ನಿಜವಾದ ಸಾಹಿತ್ಯ’

ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 16:26 IST
Last Updated 26 ಮಾರ್ಚ್ 2022, 16:26 IST
ಶಾಂತಿ ಕೆ.ಅಪ್ಪಣ್ಣ ಅವರಿಗೆ ಕವಿ ಬಿ.ಆರ್‌.ಲಕ್ಷ್ಮಣ ರಾವ್‌ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಜಿ.ಎನ್‌.ರಂಗನಾಥ ರಾವ್‌, ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರತಿಷ್ಠಾನದ ಧರ್ಮದರ್ಶಿ ಮಾವಿನಕೆರೆ ರಂಗನಾಥನ್‌ ಹಾಗೂ ಚಿಂತಾಮಣಿ ಕೊಡ್ಲೆಕೆರೆ ಇದ್ದರು –ಪ್ರಜಾವಾಣಿ ಚಿತ್ರ
ಶಾಂತಿ ಕೆ.ಅಪ್ಪಣ್ಣ ಅವರಿಗೆ ಕವಿ ಬಿ.ಆರ್‌.ಲಕ್ಷ್ಮಣ ರಾವ್‌ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಜಿ.ಎನ್‌.ರಂಗನಾಥ ರಾವ್‌, ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರತಿಷ್ಠಾನದ ಧರ್ಮದರ್ಶಿ ಮಾವಿನಕೆರೆ ರಂಗನಾಥನ್‌ ಹಾಗೂ ಚಿಂತಾಮಣಿ ಕೊಡ್ಲೆಕೆರೆ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಕ್ಕಳ ಧ್ವನಿ, ಹಕ್ಕಿಗಳ ಚಿಲಿಪಿಲಿ ಹೀಗೆ ಎಲ್ಲವನ್ನೂ ಒಳಗೊಳ್ಳುವುದೇ ನಿಜವಾದ ಸಾಹಿತ್ಯ’ ಎಂದು ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ತಿಳಿಸಿದರು.

ಶ್ರೀಮತಿ ಸರಳಾ ರಂಗನಾಥ ರಾವ್‌ ಸ್ಮಾರಕ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಂತಿ ಕೆ.ಅಪ್ಪಣ್ಣ (ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು) ಅವರಿಗೆ 2020ನೇ ಸಾಲಿನ ಶ್ರೀಮತಿ ಸರಳಾ ರಂಗನಾಥ ರಾವ್‌ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ವೆಂಕಟೇಶ ಮೂರ್ತಿ, ‘ಶಾಂತಿ ಅವರುಅಂತರಂಗದ ಕಥೆಗಳನ್ನು ಬರೆಯುತ್ತಾರೆ. ಅವು ಓದುಗರನ್ನು ಕಾಡುತ್ತವೆ. ಬಹುಮಾನಿತ ಕೃತಿಯಲ್ಲಿರುವ ‘ಜಯರಾಮ ಹುಚ್ಚನಾದದ್ದು ಹೀಗೆ’ ಎಂಬ ಕಥೆ ಪ್ರಬಲವಾದ ಸಾಮಾಜಿಕ ಶಕ್ತಿಗಳ ಹೋರಾಟ ಮತ್ತು ಒಡನಾಟವನ್ನು ಹೇಳುತ್ತದೆ. ಇಂತಹ ಕಥೆಗಳನ್ನು ಓದುವಾಗ ತನ್ಮತೆಯ ಅನುಭೂತಿ ಉಂಟಾಗುತ್ತದೆ’ ಎಂದರು.

ADVERTISEMENT

ವಿಮರ್ಶಕ ಚಿಂತಾಮಣಿ ಕೊಡ್ಲೆಕೆರೆ, ‘‌ಶಾಂತಿ ಅವರ ಬರವಣಿಗೆಯಲ್ಲಿ ಪ್ರಬುದ್ಧತೆ ಇದೆ. ಜೀವನ ದೃಷ್ಟಿಯು ಮುಕ್ತ ಹಾಗೂ ಸ್ವತಂತ್ರವಾಗಿದೆ. ದ್ವಂದ್ವವನ್ನು ಒಳಗೊಳ್ಳುವಂತಹ ಸೃಜನಶೀಲ ಶಕ್ತಿಯೂ ಅವರ ಕಥೆಗಳಲ್ಲಿ ಇವೆ.ಸಣ್ಣ ಉಪಮೆಗಳಿಂದಲೇ ಕಥೆಯ ಅರ್ಥ ಹಿಗ್ಗಿಸುವ ಸಾಮರ್ಥ್ಯ ಅವರಿಗಿದೆ’ ಎಂದರು.

ಕವಿ ಬಿ.ಆರ್‌.ಲಕ್ಷ್ಮಣರಾವ್‌, ‘ಕೆಲ ವರ್ಷಗಳ ಹಿಂದೆ ಶಾಂತಿ ಅವರ ‘ಮನಸು ಅಭಿಸಾರಿಕೆ’ ಪುಸ್ತಕ ಓದಿ ಇಷ್ಟಪಟ್ಟಿದ್ದೆ. ಪುರುಷ ಪ್ರಪಂಚದ ಆಗುಹೋಗುಗಳನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸಿ ಬರೆದಿದ್ದರು. ಅವರ ಎರಡನೇ ಕೃತಿಗೂ ಪ್ರಶಸ್ತಿ ಸಿಕ್ಕಿದೆ. ಕನ್ನಡ ಕಥಾ ಲೋಕಕ್ಕೆ ಅವರಿಂದ ಇನ್ನಷ್ಟು ಕೊಡುಗೆಗಳು ಸಿಗಲಿ’ ಎಂದು ಆಶಿಸಿದರು.

ಶಾಂತಿ ಅಪ್ಪಣ್ಣ, ‘ನಾನು ನಿರ್ದಿಷ್ಟ ಸಿದ್ಧಾಂತ ಹಾಗೂ ವರ್ಗವನ್ನು ಪ್ರತಿನಿಧಿಸುವುದಿಲ್ಲ. ಬರಹಗಾರರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಇರಬೇಕು. ಪ್ರಶಸ್ತಿಗಳಿಗೆ ಲೇಖಕರೇ ಅರ್ಜಿ ಸಲ್ಲಿಸುವುದು ಮುಜುಗರದ ವಿಚಾರ. ಇದು ಬದಲಾಗಬೇಕು’ ಎಂದರು.

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಜಿ.ಎನ್‌.ರಂಗನಾಥ ರಾವ್‌, ‘ಪತ್ನಿ ಸರಳಾ,ನನ್ನೆಲ್ಲಾ ಕೃತಿ ಹಾಗೂ ಬರಹಗಳ ಪ್ರಥಮ ವಿಮರ್ಶಕಿಯಾಗಿದ್ದಳು. ಹೊಸ ಲೇಖಕಿಯರನ್ನು ಪ್ರೋತ್ಸಾಹಿಸಬೇಕು. ಅವರ ಕೆಲಸ ಗುರುತಿಸಿ ಗೌರವಿಸಬೇಕು ಎಂದು ಒತ್ತಿ ಒತ್ತಿ ಹೇಳುತ್ತಿದ್ದಳು. ಹೀಗಾಗಿ ಆಕೆಯ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿದ್ದೇವೆ. ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಫಲಕ ಒಳಗೊಂಡಿರಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.