ಬೆಂಗಳೂರು: ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಜಾಪುರದಲ್ಲಿ ’ಸ್ವಿಫ್ಟ್ ಸಿಟಿ‘ (ಸ್ಟಾರ್ಟಪ್, ವರ್ಕ್–ಸ್ಪೇಸ್, ಇಂಟಲಿಜೆನ್ಸ್, ಫೈನಾನ್ಸ್ ಮತ್ತು ಟೆಕ್ನಾಲಜಿ) ನಿರ್ಮಿಸಲಾಗುತ್ತಿದೆ.
‘ಇದು ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ನಂತರ ಸರ್ಕಾರವೇ ಸ್ಥಾಪಿಸುತ್ತಿರುವ ಯೋಜಿತ ನಗರವಾಗಲಿದೆ. ನವೋದ್ಯಮಗಳು, ಕೆಲಸದ ಸ್ಥಳಗಳು, ಹಣಕಾಸು ಮತ್ತು ತಂತ್ರಜ್ಞಾನ ಈ ಐದೂ ಔದ್ಯಮಿಕ ಧಾರೆಗಳನ್ನು ಮುಖ್ಯವಾಗಿ ಪರಿಗಣಿಸಿದೆ. ಇದನ್ನು ಸಾಧಿಸಲು ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ ಒಂದು ಸಾವಿರ ಎಕರೆಗೂ ಹೆಚ್ಚು ಜಮೀನನ್ನು ಮೀಸಲಿಡಲಾಗುತ್ತಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
‘ಬೆಂಗಳೂರಿನಲ್ಲಿನ ಕಂಪನಿಗಳಿಗೆ ಯೋಜಿತ ಮತ್ತು ವ್ಯವಸ್ಥಿತ ತಾಣಗಳಿಲ್ಲ ಎನ್ನುವ ಅಸಮಾಧಾನ ಹಲವರಲ್ಲಿದೆ. ಅಂತಹ ಕೊರತೆಯನ್ನು ‘ಸ್ವಿಫ್ಟ್ ಸಿಟಿ’ ನೀಗಿಸಲಿದೆ. 150 ಮೀಟರ್ ಅಗಲದ ಸಂಪರ್ಕ ರಸ್ತೆ ಒಳಗೊಂಡ ವಿಶ್ವದರ್ಜೆಯ ಸೌಲಭ್ಯಗಳು, ವಸತಿ ವ್ಯವಸ್ಥೆ, ಶಾಲೆಗಳು ಇರುವಂತೆ ಅಭಿವೃದ್ಧಿ ಪಡಿಸಲಾಗುವುದು‘ ಎಂದಿದ್ದಾರೆ.
‘ಸರ್ಜಾಪುರ ಪ್ರದೇಶ ರಾಜಧಾನಿಯಲ್ಲಿರುವ ಐ.ಟಿ ತಾಣಗಳಿಗೆ ಹತ್ತಿರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 44 ಮತ್ತು 48ಕ್ಕೆ ಹತ್ತಿರಲ್ಲಿದೆ. ಇದು ನವೋದ್ಯಮಗಳ ಹಬ್ ಆಗಲಿದ್ದು, ಒಂದೊಂದು ಸ್ಥಾವರಕ್ಕೂ 20ರಿಂದ 25 ಎಕರೆ ಜಮೀನು ಒದಗಿಸಲಾಗುವುದು. ಸುಸಜ್ಜಿತ ಕಚೇರಿಗಳು, ವಸತಿ ಪ್ರದೇಶಗಳು, ಕೆಲಸದ ತಾಣಗಳು ಎಲ್ಲವೂ ಇರಲಿವೆ’ ಎಂದು ವಿವರ ನೀಡಿದ್ದಾರೆ.
‘ಕರ್ನಾಟಕವನ್ನು ಹಂತಹಂತವಾಗಿ ಸಿಲಿಕಾನ್ ರಾಜ್ಯವನ್ನಾಗಿ ಮಾಡಲಾಗುವುದು. ವಿಜಯಪುರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದು ನಗರಗಳಲ್ಲಿ ಕಿರು ‘ಕ್ವಿನ್ ಸಿಟಿ’ ಅಭಿವೃದ್ಧಿಪಡಿಸಲಾಗುವುದು. ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಕಾರವನ್ನೂ ಪಡೆಯಲಾಗುವುದು. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು’ ಎಂದಿದ್ದಾರೆ.
ಸಣ್ಣ ಮತ್ತು ಮಧ್ಯಮ ಸ್ತರದ ನವೋದ್ಯಮಗಳಿಗೆ ಕನಿಷ್ಠ 5,000 ಚದರ ಅಡಿಗಳಿಂದ ಗರಿಷ್ಠ 20,000 ಚದರ ಅಡಿಗಳಷ್ಟು ಜಾಗವನ್ನು ಭೋಗ್ಯ, ಕ್ರಯ ಅಥವಾ ಬಂಡವಾಳ ಆಧಾರಿತ ಹಂಚಿಕೆ ಮಾದರಿಯಲ್ಲಿ ಒದಗಿಸಲಾಗುವುದು. ಈ ಮೂಲಕ, ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಬಗೆಯ ಉದ್ಯಮಗಳ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿದೆ. ಮುಖ್ಯವಾಗಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ಫಿನ್-ಟೆಕ್ ನಾವೀನ್ಯತಾ ಕೇಂದ್ರವಾಗಿಯೂ ಮುಂಚೂಣಿಗೆ ಬರಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.