ADVERTISEMENT

ಎಸ್.ಟಿ ಮೀಸಲಾತಿ ಹೆಚ್ಚಳ: ಆಯೋಗ ರಚನೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 19:35 IST
Last Updated 11 ಜುಲೈ 2019, 19:35 IST

ಬೆಂಗಳೂರು: ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬ ವಾಲ್ಮೀಕಿ– ನಾಯಕ ಸಮುದಾಯದ ಬೇಡಿಕೆಯ ಸಾಧಕ– ಬಾಧಕಗಳನ್ನು ಚರ್ಚಿಸಲು ಆಯೋಗವೊಂದನ್ನು ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ ಶೇ 7 ಕ್ಕೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ವಾಲ್ಮೀಕಿ ಮತ್ತು ನಾಯಕ ಸಮುದಾಯ ಹೋರಾಟ ನಡೆಸಿತ್ತು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಈ ಸಂಬಂಧ ಬೆಂಗಳೂರಿಗೆ ಪಾದಯಾತ್ರೆ ನಡೆಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದ್ದರು.

ಕಳೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಪರಿಷ್ಕರಣೆ ವಿಷಯ ಪ್ರಸ್ತಾವವಾಗಿತ್ತು. ಸಮಿತಿ ರಚಿಸಬೇಕೋ ಅಥವಾ ಆಯೋಗ ರಚಿಸಬೇಕೋ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಪರಿಶಿಷ್ಟ ಪಂಗಡದ ಶಾಸಕರಿಂದಲೂ ಒತ್ತಡ ಹೆಚ್ಚಾಗಿದ್ದರಿಂದ ಈ ಬಗ್ಗೆ ಆಯೋಗ ರಚಿಸುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಯಿತು.

ADVERTISEMENT

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲು ಅಲ್ಲಿನ ಸರ್ಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಈ ಸಮುದಾಯಕ್ಕೆ ಶೇ 16 ರಷ್ಟು ಮೀಸಲು ನಿಗದಿ ಮಾಡಿತ್ತು. ಹೈಕೋರ್ಟ್‌ ಈ ನಿರ್ಧಾರವನ್ನು ಎತ್ತಿ ಹಿಡಿದಿದೆಯಾದರೂ ಮೀಸಲಾತಿ ಪ್ರಮಾಣವನ್ನು ಶೇ 12–13 ಕ್ಕೆ ಇಳಿಸಿದೆ. ಅದೇ ಮಾದರಿ ಅನುಸರಿಸಿ ರಾಜ್ಯದಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಈಗ ಇರುವ ಶೇ 3 ರಿಂದ ಶೇ 7 ಕ್ಕೆ ಹೆಚ್ಚಿಸಬಹುದು ಎಂಬ ಸಲಹೆಯೂ ಕಳೆದ ಸಚಿವ ಸಂಪುಟ ಸಭೆಯಲ್ಲಿ ಕೇಳಿ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.