ಬೆಂಗಳೂರು: ಸ್ಕಿಝೋಫ್ರೇನಿಯಾ ಅಥವಾ ಛಿದ್ರಮನಸ್ಕತೆ ಗಂಭೀರ ಮನೋವ್ಯಾಧಿ. ಈ ವ್ಯಾಧಿಗೆ ತುತ್ತಾದವರು ಪದೇ ಪದೇ ಭ್ರಾಂತಿಗೆ ಒಳಗಾಗುತ್ತಿರುತ್ತಾರೆ. ಮಿದುಳಿನ ಸಂಕೀರ್ಣ ಚಟುವಟಿಕೆ ಮತ್ತು ನರ ತಂತುಗಳಲ್ಲಿ ವಿದ್ಯುತ್‌ಹರಿವಿನ ವ್ಯತ್ಯಾಸ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ವೈದ್ಯರಿಗೆ ಈಗಲೂ ಸವಾಲಿನ ಕೆಲಸ.
ಡಸಾಲ್ಟ್ ಸೈನ್ಸ್ ಸಿಸ್ಟಮ್ಸ್ ಸಂಸ್ಥೆ ಮಿದುಳಿನ ಸಿಮ್ಯುಲೇಶನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇದು ಇನ್ನು ಮುಂದೆ ವೈದ್ಯರ ಕೆಲಸವನ್ನು ಸುಲಭ ಮಾಡಲಿದ್ದು, ರೋಗಿಗಳಿಗೆ ಅತ್ಯಂತ ನಿಖರವಾಗಿ ಚಿಕಿತ್ಸೆ ನೀಡಲು ಸಹಾಯಕವಾಗಲಿದೆ.
‘ಡಸಾಲ್ಟ್ ಅಭಿವೃದ್ಧಿಪಡಿಸಿರುವ 3 ಡಿ ‘ಸಿಮುಲಿಯಾ’ ಸಾಫ್ಟ್‌ವೇರ್ ಅನ್ನು ಅಳವಡಿಸಿಕೊಂಡು ನಿಮ್ಹಾನ್ಸ್‌ನಲ್ಲಿ ಅಧ್ಯಯನ ನಡೆಸುತ್ತಿದ್ದೇವೆ. ನಮಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಸ್ಕಿಝೋಫ್ರೇನಿಯಾ ರೋಗಿಗಳ ಸಮಸ್ಯೆಗಳನ್ನು ವ್ಯಕ್ತಿಗತ ನೆಲೆಯಲ್ಲಿ ಪರೀಕ್ಷೆ ಮಾಡಿ, ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಬಹುದು ಎಂಬ ವಿಶ್ವಾಸವಿದೆ’ ಎಂದು ನಿಮ್ಹಾನ್ಸ್‌ನ ಕ್ಲಿನಿಕಲ್ ನ್ಯೂರೋಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಜಿ.ವೆಂಕಟಸುಬ್ರಮಣಿಯನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ವ್ಯಾಧಿಗೆ ತುತ್ತಾದವರಲ್ಲಿ ಯೋಜನೆಗೂ ಕ್ರಿಯೆಗೂ ಸಂಬಂಧವೇ ಇರುವುದಿಲ್ಲ. ಪದೇ ಪದೇ ಭ್ರಾಂತಿಗೆ ಒಳಗಾಗುತ್ತಾರೆ. ಎಲ್ಲಿಂದಲೋ ಏನೋ ಶಬ್ದಗಳು ಕೇಳಿ ಬರುತ್ತದೆ ಎಂದು ಭ್ರಮಿಸುತ್ತಾರೆ. ಇವೆಲ್ಲದರ ಪರಿಣಾಮ ಸಾಮಾಜಿಕವಾಗಿ ವಿಮುಖರಾಗಿ, ತೀವ್ರ ಖಿನ್ನತೆಗೆ ಒಳಗಾಗುತ್ತಾರೆ. ಚಲನಶೀಲತೆ ಕಳೆದು ಕೊಳ್ಳುತ್ತಾರೆ’ ಎಂದು ಅವರು ತಿಳಿಸಿದರು.
ಇದರ ಅನ್ವಯ ಹೇಗೆ: ಮಿದುಳಿನಲ್ಲಿರುವ ಅಷ್ಟೂ ನರತಂತುಗಳು, ಕೋಶಗಳು ಮತ್ತು ಅಂಗಾಂಶಗಳ ಸಿಮ್ಯುಲೇಶನ್ ಅಥವಾ ಅನುಕರಣೆಯ ತಂತ್ರಾಂಶವೇ ಸಿಮುಲಿಯಾ. ಮಿದುಳಿನಲ್ಲಿ ವಿದ್ಯುತ್, ರಾಸಾಯನಿಕ ಮತ್ತು ಕಂಪನದಲ್ಲಿ ಆಗುವ ಏರುಪೇರುಗಳನ್ನು ಸಿಮುಲಿಯಾ ನಿಖರವಾಗಿ ಅನುಕರಣೆ ಮಾಡುತ್ತದೆ. ನಾವು ರೋಗಿಯ ಮಿದುಳಿನಲ್ಲಿ ಆಗುವ ರಾಸಾಯನಿಕ ಮತ್ತು ವಿದ್ಯುತ್ ಹರಿವಿನ ವೈಪರೀತ್ಯವನ್ನು ಗಮನಿಸಿತ್ತೇವೆ. ಸಿಮುಲಿಯಾ ಸಿಮ್ಯುಲೇಷನ್ ಮೂಲಕ ರೋಗಿಯ ಮಿದುಳಿನಲ್ಲಿ ಎಲ್ಲಿ ಸಮಸ್ಯೆ ಇದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಿಕಿತ್ಸೆ ಮತ್ತು ಔಷಧವನ್ನು ನಿರ್ದಿಷ್ಟವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ವೆಂಕಟಸುಬ್ರಮಣಿಯನ್ ತಿಳಿಸಿದರು.
ಮಿದುಳಿನ ಅಧ್ಯಯನ ಮತ್ತು ಪ್ರಯೋಗಗಳಿಗೆ ನೈಜ ಮಿದುಳುಗಳು ಲಭ್ಯತೆ ಅತ್ಯಂತ ಕಷ್ಟ. ವೈದ್ಯರು ಮತ್ತು ಸಂಶೋಧಕರ ಸಮಸ್ಯೆಯನ್ನು ಇಂತಹ ಸಿಮುಲಿಯಾ ಮತ್ತು ಬಯೊಲಿಯಾನಂತಹ ಸಿಮ್ಯುಲೇಶನ್‌ಗಳು ಪರಿಹಾರವಾಗಿವೆ. ರೋಗಿಗಳ ಮಿದುಳಿನ ವಿದ್ಯಮಾನಗಳನ್ನು ಸಿಮ್ಯುಲೇಶನ್ ಮೂಲಕ ಅಧ್ಯಯನ ನಡೆಸಲಾಗುವುದು ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.