ADVERTISEMENT

ಶಾಲೆಯಿಂದ ಹೊರಟವರು ಮನೆ ಸೇರಲಿಲ್ಲ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 20:20 IST
Last Updated 24 ನವೆಂಬರ್ 2018, 20:20 IST

ಮಂಡ್ಯ: ‘ಸ್ವಲ್ಪ ಹೊತ್ತು ಇರೇ ಮಾತಾಡೋಣ ಎಂದೆ. ಒಂದು ವೇಳೆ ಇದ್ದಿದ್ದರೆ ಅವಳ ಜೀವ ಉಳಿಯುತ್ತಿತ್ತು’ ಎಂದು ಶಾಲಾ ಬಾಲಕಿಯೊಬ್ಬಳು ಬಿಕ್ಕುತ್ತಾ ಹೇಳುತ್ತಿದ್ದರೆ, ಪಕ್ಕದಲ್ಲೇ ಇದ್ದ ಸುನೀತಾ ತನ್ನ ಮಗಳನ್ನು ಕಳೆದುಕೊಂಡು ಗೋಳಿಡುತ್ತಿದ್ದರು.

ಕನಗನಮರಡಿಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ವದೇಸಮುದ್ರದ ಪವಿತ್ರಾ ಮೃತದೇಹದ ಮುಂದೆ ತಾಯಿರೋದಿಸುತ್ತಿದ್ದ ದೃಶ್ಯ ಕರುಳು ಕಿವುಚುವಂತಿತ್ತು.

ಇದೇ ಗ್ರಾಮದ ರವಿಕುಮಾರ್ 7ನೇ ತರಗತಿ ಓದುತ್ತಿದ್ದ. ಈತನೂ ಯಮಸ್ವರೂಪಿಯಾದ ಇದೇ ಬಸ್‌ ಹತ್ತಿದ್ದ. ‘ಇವರಪ್ಪ ವರ್ಷದ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಈಗ ಇವನೂ ಹೋದ’ ಎಂಬ ಅವರ ಮಾತುಗಳು ಸೇರಿದ್ದ ಜನರಕಣ್ಣಾಲಿಗಳಲ್ಲಿ ನೀರು ಉಕ್ಕಿಸಿತು.

ADVERTISEMENT

ಸ್ವಲ್ಪ ತಡವಾಗಿದ್ದರೆ: ಒಂದು ವೇಳೆ ಬಸ್‌, ಪಾಂಡವಪುರದಿಂದ 11.45ಕ್ಕೆ ಹೊರಡುವ ಬದಲು ಸ್ವಲ್ಪ ತಡವಾಗಿ ಹೊರಟಿದ್ದರೆ ಮತ್ತಷ್ಟು ಮಕ್ಕಳ ಮಾರಣಹೋಮವೇ ನಡೆಯುತ್ತಿತ್ತು. ಶಾಲೆಯಿಂದ ಬೇಗ ಹೊರಟವರಷ್ಟೇ ಈ ನತದೃಷ್ಟ ಬಸ್‌ ಹತ್ತಿದ್ದರು. ಈ ಭಾಗದ ಶಾಲಾ ಮಕ್ಕಳು ಇಂತಹ ಬಸ್‌ಗಳನ್ನೇ ಪ್ರಯಾಣಕ್ಕೆ ಅವಲಂಬಿಸಿದ್ದಾರೆ. ಬಸ್‌ ಪ್ರಯಾಣದರ ಕಡಿಮೆ ಹಾಗೂ ಗ್ರಾಮದಲ್ಲಿ ಹೇಳಿದ ಕಡೆ ನಿಲ್ಲುತ್ತದೆ ಎಂಬ ಕಾರಣಕ್ಕೆ ಮಕ್ಕಳು ಹೆಚ್ಚಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ.

ಮಗುವಿಗಾಗಿ ತಾಯಿ ಹುಡುಕಾಟ:ತನ್ನ 2 ವರ್ಷದ ಮಗು ಪ್ರೇಕ್ಷಾಳಿಗಾಗಿ ಆಕೆಯ ತಾಯಿ ಹುಡುಕಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಬಸ್‌ನಿಂದ ಶವಗಳನ್ನು ರಕ್ಷಣಾ ಪಡೆಯ ಸಿಬ್ಬಂದಿ ಮೇಲಕ್ಕೆ ಎತ್ತುತ್ತಿದ್ದಂತೆ ತಂದೆ ಓಡಿ ಹೋಗಿ ನೋಡುತ್ತಿದ್ದರು. ಕಣ್ಣೀರಿಡುತ್ತಲೇ ಸಿಕ್ಕಿತಾ ಎಂದು ಪ್ರಶ್ನಿಸುತ್ತಿದ್ದ ತಾಯಿ, ಮತ್ತೆ ನೆಲದ ಮೇಲೆ ಕುಸಿಯುತ್ತಿದ್ದರು. ಕಡೆಗೆ ಮೃತದೇಹ ಸಿಕ್ಕಿದ ಮೇಲಂತೂ ಅವರ ಆಕ್ರಂದನ ಮುಗಿಲು ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.