ADVERTISEMENT

ಎಸ್‌ಡಿಪಿಐ, ಪಿಎಫ್‌ಐ ಬಿಜೆಪಿಯ 'ಬಿ' ಟೀಂ: ಪ್ರಮೋದ್‌ ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 12:49 IST
Last Updated 22 ಜುಲೈ 2022, 12:49 IST
 ಪ್ರಮೋದ್‌ ಮುತಾಲಿಕ್‌ 
 ಪ್ರಮೋದ್‌ ಮುತಾಲಿಕ್‌    

ವಿಜಯಪುರ: ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಬಿಜೆಪಿಯ ಬಿ ಟೀಂ ಎಂಬ ಆರೋಪ ನೂರಕ್ಕೆ ನೂರು ಸತ್ಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಆಗಿರುವ ಮುಸ್ಲಿಮರನ್ನು ಎಸ್‌ಡಿಪಿಐ, ಪಿಎಫ್‌ಐವ್ಯವಸ್ಥಿತವಾಗಿ ಒಡೆಯುತ್ತಿದೆ. ಇದರಿಂದ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗುತ್ತಿದೆ. ದೇಶದ ಸುರಕ್ಷತೆ, ಹಿಂದೂಗಳ ಸುರಕ್ಷತೆ ಬಿಜೆಪಿಗೆ ಬೇಕಾಗಿಲ್ಲ. ಅಧಿಕಾರಕ್ಕೆ ಬಂದು ಮೆರೆಯಬೇಕು ಎಂಬುದು ಬಿಜೆಪಿಯ ಅಜೆಂಡವಾಗಿದೆ. ಹೀಗಾಗಿ ಈ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್‌ ಮಾಡುಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತಾಲಿಕ್‌, ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬಿಜೆಪಿಯಲ್ಲಿ ನಮ್ಮಂತ ಹಿಂದೂ ಪರ ಮುಖಂಡರು, ಕಾರ್ಯಕರ್ತರಿಗೆ ಅವಕಾಶ ಇಲ್ಲ. ಆ ಪಕ್ಷದಲ್ಲಿ ಭ್ರಷ್ಟರು, ಲೂಟಿಕೋರರು, ಲಫಂಗರಿಗೆ ಮಾತ್ರ ಅವಕಾಶ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಹಿಂದುಗಳಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿ ಇರುವ ಆರೋಪಿಗಳು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋನ್‌ನಲ್ಲಿ ಆನಂದವಾಗಿ ಮಾತನಾಡುತ್ತಾರೆ ಎಂದಾದರೆ ಜೈಲುಗಳೆಂದರೆ ಲಾಡ್ಜಿಂಗ್‌, ಬೋರ್ಡಿಂಗಾ? ಎಂದು ಪ‍್ರಶ್ನಿಸಿದರು.

ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆ ಸಂದರ್ಭದಲ್ಲಿಭಟ್ಕಳ ಮೂಲದ ಮಹಿಳೆ ಬುರ್ಕಾದಲ್ಲಿ ಚಾಕು ಅಡಗಿಸಿಕೊಂಡು ಬಂದು ಇರಿದಿರುವುದು ನೋಡಿದರೆ ಭಟ್ಟಳದಲ್ಲಿ ಭಯೋತ್ಪಾದನೆ ಜೀವಂತವಾಗಿರುವುದು ಸಾಬೀತಾಗುತ್ತದೆ. ಭಟ್ಕಳದ ಮೂಲಕ ಇಸ್ಲಾಂ ಮತಾಂಧತೆ ಹರಡುತ್ತಿದೆ ಎಂಬುದಕ್ಕೆ ಕೆರೂರು ಘಟನೆ ಸಾಕ್ಷಿಯಾಗಿದೆ ಎಂದರು.

ಮುಸ್ಲಿಮರ ಪುಂಡಾಟಿಕೆ, ಗುಂಡಾಗಿರಿ ಇನ್ನು ನಡೆಯುವುದಿಲ್ಲ. ಹಿಂದೂ ಸಮಾಜ ಜಾಗೃತವಾಗಿದೆ. ನಿಮ್ಮ ಪಾಡಿಗೆ ನೀವಿದ್ದರೇ ಸರಿ. ಹಿಂದುಗಳನ್ನು ಕೆಣಕುವುದು, ಗಲಾಟೆ ಮಾಡುವುದು, ಕೊಲೆ ಮಾಡುವುದು ಇನ್ನು ಮುಂದೆ ನಡೆಯುವುದಿಲ್ಲ.ಹಿಂದೂ ಸಮಾಜ ತಕ್ಕ ಉತ್ತರ ಕೊಡಲು ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.

ಈ ದೇಶದಲ್ಲಿ ಮುಸ್ಲಿಮರು ಬದುಕುವುದಾದರೆ ಸಂವಿಧಾನದ ಆಧಾರದ ಮೇಲೆ ಬದುಕಲಿ. ಇಲ್ಲವಾದರೆ ಬೇಕಾದಷ್ಟು ದೇಶಗಳಿವೆ. ಕೊಲೆಯೇ ಮುಖ್ಯ, ದ್ವೇಷವೇ ಮುಖ್ಯ ಎಂದಾದರೆ ಈ ದೇಶದಲ್ಲಿ ನಿಮಗೆ ಜಾಗ ಇಲ್ಲ ಎಂದು ಗುಡುಗಿದರು.‌

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ಹಣವನ್ನು ಮುಸ್ಲಿಂ ಮಹಿಳೆ ಎಸೆದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್‌,ಮುಸ್ಲಿಮರನ್ನು ಕಾಂಗ್ರೆಸಿಗರು ಇದುವರೆಗೆ ಮತ ಬ್ಯಾಂಕ್‌ ಆಗಿ ಉಪಯೋಗಿಸಿಕೊಂಡಿದ್ದರು. ಆದರೆ, ಅವರು ಇದೀಗ ಕಾಂಗ್ರೆಸ್‌ಗೆ ಕಿಮ್ಮತ್ತು ಕೊಡುತ್ತಿಲ್ಲ,ಕಾಂಗ್ರೆಸ್‌ ಅನ್ನು ದಿಕ್ಕರಿಸಿದ್ದಾರೆ ಎಂಬುದಕ್ಕೆ ಕೆರೂರಿನ ಮುಸ್ಲಿಂ ಮಹಿಳೆ ಹಣವನ್ನು ಬಿಸಾಕಿರುವುದು ಸಾಕ್ಷಿ ಎಂದರು.

ಕಾಂಗ್ರೆಸ್‌ ನಾಯಕರು ತಮ್ಮ ಆಡಳಿತಾವಧಿಯಲ್ಲಿರಾಷ್ಟ್ರಭಕ್ತ ಮುಸ್ಲಿಮರನ್ನು ಬೆಳಸಲಿಲ್ಲ. ಬದಲಿಗೆ ಮುಸ್ಲಿಂ ಭಯೋತ್ಪಾದಕರನ್ನು, ಮುಸ್ಲಿಂ ಗುಂಡಾಗಳನ್ನು ಬೆಳೆಸಿದ್ದಾರೆ. ಇದೀಗ ಅವರೇ ಕಾಂಗ್ರೆಸ್‌ಗೆ ತಿರುಗುಬಾಣವಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.