ADVERTISEMENT

‘ನಾಗರಿಕ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 40 ಎಕರೆ ಅಗತ್ಯ’

ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ 2023ಕ್ಕೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 17:28 IST
Last Updated 25 ಜುಲೈ 2019, 17:28 IST
ಮಹೇಶ್ ಸಿಂಗ್
ಮಹೇಶ್ ಸಿಂಗ್   

ಕಾರವಾರ:‘ಇಲ್ಲಿನ ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿಯ ಭಾಗವಾಗಿ ನೌಕಾನೆಲೆಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರವುಹೆಚ್ಚುವರಿಯಾಗಿ 40 ಎಕರೆ ಜಮೀನನ್ನುಸ್ವಾಧೀನ ಪಡಿಸಿಕೊಂಡರೆ, ಇಲ್ಲಿ ನಾಗರಿಕ ವಿಮಾನ ನಿಲ್ದಾಣವನ್ನೂ ಆರಂಭಿಸಬಹುದು’ ಎಂದು ಕರ್ನಾಟಕ ನೌಕಾನೆಲೆ ಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಹೇಳಿದರು.

ನೌಕಾನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ವಿಮಾನನಿಲ್ದಾಣವು 2,000 ಮೀಟರ್ ಉದ್ದದ ರನ್‌ವೇ ಹೊಂದಿರುತ್ತದೆ. ಆದರೆ, ನಾಗರಿಕ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಆಗಲು 3,000 ಮೀಟರ್ ಉದ್ದದ ರನ್‌ವೇ ಬೇಕು. ಇದಕ್ಕೆ 40 ಎಕರೆ ಜಮೀನು ಅಗತ್ಯವಿದೆ’ ಎಂದು ವಿವರಿಸಿದರು.

‘ಸುಮಾರು ₹ 20 ಸಾವಿರ ಕೋಟಿ ವೆಚ್ಚದಲ್ಲಿ ನೌಕಾನೆಲೆಯ ವಿಸ್ತರಣೆ ಕಾಮಗಾರಿಯು 2023ರಲ್ಲಿ ಪೂರ್ಣಗೊಳ್ಳಲಿದೆ. 2025ರ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ವಿಶ್ವಾಸವಿದೆ. ಅದನ್ನು ನಾಗರಿಕ ವಿಮಾನಗಳ ಹಾರಾಟಕ್ಕೂ ಬಳಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ತೋರಿದೆ. ಜಮೀನು ವಶಪಡಿಸಿಕೊಂಡು ಟರ್ಮಿನಲ್‌ ನಿರ್ಮಿಸಿಕೊಳ್ಳಬೇಕು. ಇದಾದರೆ ಈ ಭಾಗದ ಪ್ರವಾಸೋದ್ಯಮವೂ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಬಲ ಸಿಕ್ಕಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಎರಡನೇ ಹಂತದ ವಿಸ್ತರಣೆ ಪೂರ್ಣಗೊಂಡಾಗ ನೌಕಾನೆಲೆಯ ಸಾಮರ್ಥ್ಯಮೂರು ಪಟ್ಟು ಹೆಚ್ಚಾಗಲಿದೆ. ತಕ್ಷಣವೇ 32 ಹಡಗುಗಳು ಮತ್ತು ಸಬ್‌ ಮರೀನ್‌ಗಳನ್ನು ಇಲ್ಲಿ ಲಂಗರು ಹಾಕಬಹುದು.ಕ್ರಮೇಣ ಈ ಸಾಮರ್ಥ್ಯವನ್ನು 50, ನಂತರ 100 ಹಡಗುಗಳಿಗೆ ಹೆಚ್ಚಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಕಾರವಾರವು ನೌಕಾಪಡೆಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.