ADVERTISEMENT

ಬಿಜೆಪಿಯಲ್ಲಿ ನಾಯಕನ ಹುಡುಕಾಟ? ಯಡಿಯೂರಪ್ಪ ಕುರ್ಚಿ ಭಂಗ?

ಯಾರಿಗೆ ಒಲಿಯಲಿದೆ ಅದೃಷ್ಟ?

ವೈ.ಗ.ಜಗದೀಶ್‌
Published 28 ನವೆಂಬರ್ 2020, 20:27 IST
Last Updated 28 ನವೆಂಬರ್ 2020, 20:27 IST
   

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಬಿ.ಎಸ್‌. ಯಡಿಯೂರಪ್ಪ ಅವರ ಸ್ಥಾನದಲ್ಲಿ ‘ಸಮರ್ಥ’ರನ್ನು ಕೂರಿಸಲು ನಿಶ್ಚಯಿಸಿರುವ ಬಿಜೆಪಿ ವರಿಷ್ಠರು ‘ಉತ್ತರಾಧಿಕಾರಿ’ಗೆ ಹುಡುಕಾಟ ನಡೆಸಿದ್ದಾರೆ.

ಈ ಆಯ್ಕೆಯನ್ನು ಯಡಿಯೂರಪ್ಪ ಮರ್ಜಿಗೆ ಬಿಡಲಾಗುತ್ತದೆಯೋ ಅಥವಾ ವರಿಷ್ಠರು ಸೂಚಿಸಿದವರೇ ಅಧಿಕಾರ ಸೂತ್ರ ಹಿಡಿಯುತ್ತಾರೋ ಎಂಬುದು ಬಿಜೆಪಿಯಲ್ಲೀಗ ಚರ್ಚೆಯ ಪ್ರಮುಖ ವಿಷಯ. ಏತನ್ಮಧ್ಯೆ, ವರಿಷ್ಠರ ಸೂಚನೆಯನ್ನು ಧಿಕ್ಕರಿಸುವ ನಿರ್ಣಯಕ್ಕೆ ಬಂದಂತಿರುವ ಯಡಿಯೂರಪ್ಪ, ‘ಕುರ್ಚಿ ಬಿಟ್ಟು ಇಳಿಯಲಾರೆ’ ಎಂಬ ಹಟ ತೊಟ್ಟಿದ್ದಾರೆ. ಇದು, ಬಿಜೆಪಿ ಬಣ ಜಗಳದ ತೀವ್ರತೆಗೆ ಕಾರಣವಾಗಿದೆ.

ಆಡಳಿತ ನಿರ್ವಹಣೆಯಲ್ಲಿ ಯಡಿಯೂರಪ್ಪ ಸೋಲುತ್ತಿರುವುದು, ಅವರ ಮಗ ಬಿ.ವೈ. ವಿಜಯೇಂದ್ರ ಪರೋಕ್ಷವಾಗಿ ಆಡಳಿತ ನಡೆಸುತ್ತಿರುವುದು ಬದಲಾವಣೆಯತ್ತ ಚಿತ್ತ ಹರಿಸಲು ಕಾರಣ. ಆಡಳಿತ ಹಸ್ತಕ್ಷೇಪ ಹಾಗೂ ಸಾರ್ವಜನಿಕ ಲಜ್ಜೆಯೂ ಇಲ್ಲದಂತೆ ಭ್ರಷ್ಟಾಚಾರವನ್ನು ಬಿಡುಬೀಸಾಗಿ ನಡೆಸಲಾಗುತ್ತಿದೆ ಎಂಬುದು ‘ಸಂಘ ನಿಷ್ಠ’ ಬಿಜೆಪಿ ಶಾಸಕರ ಆಕ್ರೋಶ. ಕನಿಷ್ಠ ಪ್ರಾಮಾಣಿಕತೆ ಉಳಿಸಿಕೊಂಡಿರುವ ಕೆಲವು ಶಾಸಕರು ‘ಇಂತಹ ಸರ್ಕಾರದಲ್ಲಿ ತಾವು ಏಕೆ ಭಾಗಿಯಾಗಿರಬೇಕು’ ಎಂದು ಪ್ರಶ್ನಿಸಿರುವುದರಿಂದ ನಾಯಕತ್ವ ಬದಲಾವಣೆಗೆ ಪಕ್ಷದ ವರಿಷ್ಠರು ಮನಸ್ಸು ಮಾಡಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತಂದ ಹೆಗ್ಗಳಿಕೆ ಹೊಂದಿರುವ ಯಡಿಯೂರಪ್ಪ ಮೇಲೆ ಗೌರವ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ‘ಶುಭ ವಿದಾಯ’ದ ರೀತಿಯಲ್ಲಿ ಮುಖ್ಯಮಂತ್ರಿಯೇ ಕುರ್ಚಿ ತ್ಯಾಗ ಮಾಡಲಿ ಎಂಬ ಅಪೇಕ್ಷೆ ಹೊಂದಿದ್ದಾರೆ. ಇದಕ್ಕೆ ಯಡಿಯೂರಪ್ಪ ಒಪ್ಪಿಕೊಳ್ಳುವುದಾದಲ್ಲಿ ಅವರು ಹೇಳಿದವರನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವಲ್ಲಿ ಪಕ್ಷ ಸಿದ್ಧವಿದೆ.

ಆರ್. ಅಶೋಕ್ ಮುಖ್ಯಮಂತ್ರಿ, ಬಿ.ವೈ. ವಿಜಯೇಂದ್ರ ಉಪಮುಖ್ಯಮಂತ್ರಿ ಎಂಬ ಪ್ರಸ್ತಾವವನ್ನು ಮೊದಲು ಯಡಿಯೂರಪ್ಪ ಮುಂದಿಟ್ಟಿದ್ದರು. ಬಳಿಕ ಹಿಂದೆ ಸರಿದ ಅವರು, ಬಸವರಾಜ ಬೊಮ್ಮಾಯಿ ಹೆಸರನ್ನು ಮುಂದೆ ಇಟ್ಟಿದ್ದಾರೆ. ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಹೆಸರನ್ನೂ ತೇಲಿ ಬಿಟ್ಟಿದ್ದಾರೆ. ಬೊಮ್ಮಾಯಿ, ಕಾರಜೋಳ ಆರ್‌ಎಸ್‌ಎಸ್‌ ಮೂಲದವರಾಗದೇ ಇರುವುದರಿಂದ ವರಿಷ್ಠರ ಸಮ್ಮತಿ ಸಿಗುವುದು ಕಷ್ಟ. ಗೃಹ ಸಚಿವರಾಗಿರುವ ಬೊಮ್ಮಾಯಿ, ತಮ್ಮ ಹಿಂದಿನ ಉದಾರವಾದಿ ಧೋರಣೆ ಬದಿಗಿಟ್ಟು, ಸಂಘ ಪ್ರಣೀತ ‘ಹಿಂದೂ ರಾಷ್ಟ್ರವಾದ’ದತ್ತ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಮಂಗಳೂರಿನ ಗಲಾಟೆ, ‘ಲವ್ ಜಿಹಾದ್‌’ ಹಾಗೂ ಡ್ರಗ್ಸ್‌ ಪ್ರಕರಣದಲ್ಲಿ ಬೊಮ್ಮಾಯಿ ತೆಗೆದುಕೊಂಡಿರುವ ಕ್ರಮಗಳು ‘ಸಂಘ’ದವರನ್ನು ಮೆಚ್ಚಿಸಿವೆ. ಹೀಗಾಗಿ, ಈ ಆಯ್ಕೆಗೆ ವರಿಷ್ಠರು ಒಪ್ಪಿದರೂ ಅಚ್ಚರಿಯಿಲ್ಲ ಎಂದೂ ಹೇಳಲಾಗುತ್ತಿದೆ.

ಬಿಜೆಪಿಯ ಮತ್ತೊಂದು ಮೂಲದ ಪ್ರಕಾರ, ಈಗ ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದ ಶಿವಕುಮಾರ ಉದಾಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರುಗಳು ಪರಿಶೀಲನೆಯಲ್ಲಿವೆ. ಅವಕಾಶ ಸಿಕ್ಕರೆ ತಾವೊಂದು ಕೈ ಯಾಕೆ ನೋಡಬಾರದು ಎಂಬ ಯತ್ನದಲ್ಲಿದ್ದಾರೆ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಕಂದಾಯ ಸಚಿವ ಆರ್. ಅಶೋಕ. ಹೀಗೆ ಹಲವರ ಹೆಸರು ಇದ್ದರೂ ಇವರೆಲ್ಲರನ್ನು ಹಿಂದಿಕ್ಕಿ ಈ ಸ್ಥಾನ ಆಕ್ರಮಿಸುವ ಆಲೋಚನೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಲ್ಲಿದೆ.

ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಾದರೆ ಲಿಂಗಾಯತ ಸಮುದಾಯವರಿಗೆ ಆ ಸ್ಥಾನ ಬಿಟ್ಟುಕೊಡಬೇಕು.

ಅದರ ಬದಲು ಒಕ್ಕಲಿಗ, ಬ್ರಾಹ್ಮಣರನ್ನು ತಂದು ಕೂರಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ. ಈಗ ಬದಲಾವಣೆ ಆಗುವುದಿದ್ದರೆಅ ಲಿಂಗಾಯತರಿಗೆ ನೀಡ ಲಾಗುತ್ತದೆ ಎಂಬ ಚರ್ಚೆಯೂ ಇದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಯಡಿಯೂರಪ್ಪ ಮನೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಅವರ ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಇಬ್ಬರು ಗಂಡುಮಕ್ಕಳು–ಸೊಸೆಯಂದಿರು ಹೀಗೆ ಎಲ್ಲರೂ ಭಾಗಿಯಾಗಿದ್ದರು. ‘ಯಾವುದೇ ಸಂಘರ್ಷಕ್ಕೆ ಇಳಿಯದೆ, ಎಲ್ಲವೂ ಸಮಾಧಾನದಿಂದ ಮುನ್ನಡೆಸಿಕೊಂಡು ಆರು ತಿಂಗಳು ಅಧಿಕಾರ ಪೂರೈಸಿ. ಅಷ್ಟೊತ್ತಿಗೆ ವಿಜಯೇಂದ್ರಗೆ ಪಕ್ಷದಲ್ಲಿ ಹಿಡಿತ ಸಿಗಲಿದ್ದು, ಅವನನ್ನು ಬಿಟ್ಟು ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಅಲ್ಲಿಯವರೆಗೆ ದುಡುಕಿ ಏನೂ ಮಾಡಬೇಡಿ ಎಂದು ಮಕ್ಕಳು ಕಿವಿಮಾತು ಹೇಳಿದ್ದಾರೆ. ಹೀಗಾಗಿ, ಸೆಡ್ಡು ಹೊಡೆಯಲು ಸಿದ್ಧರಾಗಿದ್ದ ಯಡಿ ಯೂರಪ್ಪ, ಎಲ್ಲವನ್ನೂ ತಾಳ್ಮೆಯಿಂದ ಸಂಭಾಳಿಸಿಕೊಂಡು ಹೋಗುವ ಜಾಣ ತನದ ಹಾದಿ ಅನುಸರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ಹೇಳಿವೆ.

ನಾಯಕತ್ವ ಬದಲಾವಣೆ ಮಾಡಲೇಬೇಕೆಂದು ಕುಳಿತಿರುವ ವರಿಷ್ಠರು ಇದನ್ನು ಯಾವ ರೀತಿ ಸ್ವೀಕರಿಸಿ, ಮುಂದಡಿ ಇಡಲಿದ್ದಾರೆ ಎಂಬುದು ಸದ್ಯದ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.