ADVERTISEMENT

ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್‌ ಕಲಿಕೆ ಪರಿಹಾರ: ಡಾ. ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 11:02 IST
Last Updated 13 ಜೂನ್ 2020, 11:02 IST
ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ
ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ   

ಬೆಂಗಳೂರು: ತಂತ್ರಜ್ಞಾನದ ಮೂಲಕ ಸಮಾಜದಲ್ಲಿ ಎಲ್ಲರನ್ನೂ ತಲುಪಲು ಸಾಧ್ಯವಿರುವುದರಿಂದ ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್‌ ಕಲಿಕೆ ಪರಿಹಾರವಾಗಿದೆ. ಹಾಗಾಗಿ, ಎಲ್ಲ ಶಿಕ್ಷಣ ಸಂಸ್ಥೆಗಳು ಡಿಜಿಟಲ್‌ ಕಲಿಕೆಗೆ ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಉನ್ನತ ಶಿಕ್ಷಣದ ಡಿಜಿಟಿಲೀಕರಣ- ಸವಾಲು ಮತ್ತು ಅವಕಾಶಗಳ ಕುರಿತು ಪದ್ಮಶ್ರೀ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆಯೋಜಿಸಿದ್ದ ವಿಡಿಯೊ ಸಂವಾದದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದ ಯಾವುದೇ ವರ್ಗ, ಸ್ಥಳ, ಜನಾಂಗದ ಭೇದವಿಲ್ಲದೇ ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ತಲುಪಿಸಲು ಇರುವ ಮಾರ್ಗವೇ ಡಿಜಿಟಲ್‌ ಕಲಿಕೆ. ಶೈಕ್ಷಣಿಕ ಅಸಮಾನತೆ ಹೋಗಲಾಡಿಸಲು ಇದು ಪರಿಹಾರವೂ ಆಗಿದ್ದು, ಕುಗ್ರಾಮದಲ್ಲಿರುವ ವಿದ್ಯಾರ್ಥಿಗಳು ಸಹ ಡಿಜಿಟಲ್‌ ವ್ಯವಸ್ಥೆ ಮೂಲಕ ನುರಿತ ಉಪನ್ಯಾಸಕರ ಪಾಠ ಕೇಳಲು ಅವಕಾಶ ಒದಗಿದೆ. ಜತೆಗೆ, ಪಠ್ಯ ವಿಷಯಗಳ ಲಿಖಿತ ಮಾಹಿತಿಯೂ ಅವರ ಕೈ ಸೇರುತ್ತಿರುವುದಿಂದ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಸಂಸ್ಥೆಗಳು ಸಮಯ ವ್ಯರ್ಥ ಮಾಡದೆ ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಅವರು ಹೇಳಿದರು.

ಡಿಜಿಟಲ್‌ ಕಲಿಕೆಗೆ ಸವಾಲುಗಳಿದ್ದು, ಅದನ್ನು ಪರಿಣಾಮಕಾರಿ ಆಗಿ ಎದುರಿಸುವ ಕೆಲಸವೂ ಆಗುತ್ತಿದೆ. ಇಂಟರ್ನೆಟ್‌ ಸಂಪರ್ಕ ಹಾಗೂ ಮೊಬೈಲ್‌, ಲ್ಯಾಪ್‌ಟಾಪ್‌ನಂಥ ಗ್ಯಾಡ್ಜೆಟ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆದಿದೆ. ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಥವಾ ಸರ್ಕಾರದ ಹಣ ಬಳಸಿಕೊಂಡು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಪರಿಶೀಲಿಸಲಾಗುವುದು. ಎಲ್ಲೆಡೆ ತಡೆ ರಹಿತ ಗುಣಮಟ್ಟದ 4ಜಿ ನೆಟ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ADVERTISEMENT

ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗದಂತೆ ಪಾಠ ಪ್ರವಚನಗಳನ್ನು ವಿಡಿಯೊ ಮಾಡಿ ಯೂಟ್ಯೂಬ್ ಚಾನಲ್‌ಗಳಾದ 'ವಿಜಯೀ ಭವ', 'ಜ್ಞಾನ ನಿಧಿ' ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. 'ಸ್ವಯಂ' ಎಂಬ ಆನ್‌ಲೈನ್ ವೇದಿಕೆ ಮೂಲಕ ಯುಜಿಸಿ ಪಾಠ ಮಾಡಿದೆ. ಕರ್ನಾಟಕ ಮುಕ್ತ ವಿವಿಯಿಂದಲೂ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ವಿದ್ಯಾರ್ಥಿಗಳಿಗೆ ಇ-ನೋಟ್ಸ್, ಪಿಪಿಟಿ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೂತನ ಶಿಕ್ಷಣ ನೀತಿಯಡಿ ಡಿಜಿಟಲ್‌ ಕಲಿಕೆಗೆ ಒತ್ತು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ನೂತನ ಶಿಕ್ಷಣ ನೀತಿಯಡಿ ಹೊಸ ಸಂಸ್ಥೆಗಳ ಸ್ಥಾಪನೆಗೆ ಮಾತ್ರವಲ್ಲದೆ, ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ, ಸಂಸ್ಥೆಗಳ ಶ್ರೇಯಾಂಕ ಸುಧಾರಣೆ ಹಾಗೂ ಶಿಕ್ಷಣದ ಡಿಜಿಟಲೀಕರಣಗೊಳಿಸಲು ಅನುದಾನ ನೀಡಲಾಗುತ್ತದೆ. ಕೇಂದ್ರದ ಆದೇಶವನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಿ, ಆನ್‌ಲೈನ್‌ ಕಲಿಕೆ ಸರಳಗೊಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.