ADVERTISEMENT

ಸೀಟು ಹಂಚಿಕೆ: ಒಮ್ಮತದ ತೀರ್ಮಾನಕ್ಕೆ ಬರಲು 'ದೋಸ್ತಿ' ವಿಫಲ; ಹೈಕಮಾಂಡ್ ಅಂಗಳಕ್ಕೆ?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 8:19 IST
Last Updated 4 ಮಾರ್ಚ್ 2019, 8:19 IST
   

ಬೆಂಗಳೂರು: ಲೋಕಸಭೆ ಚುನಾವಣೆಸೀಟು ಹಂಚಿಕೆ ಸಂಬಂಧಿಸಿದ ಮಹತ್ವದ ಸಮನ್ವಯ ಸಮಿತಿ ಸಭೆಯಲ್ಲಿ ದೋಸ್ತಿ ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬರಲು ವಿಫಲವಾಗಿವೆ.

ಸೀಟು ಹಂಚಿಕೆ ಗೊಂದಲ ಹೈಕಮಾಂಡ್ ಅಂಗಳಕ್ಕೆ ಹೋಗುವುದು ಖಚಿತವಾಗಿದೆ. ಸೋಮವಾರಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆ ಅಪೂರ್ಣಗೊಂಡಿದೆ.

ಸೀಟು ಸಂಚಿಕೆ ಸಂಬಂಧ ಎರಡೂ ಪಕ್ಷಗಳ ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಆದರೆ, ನಾಯಕರು ಪಟ್ಟು ಸಡಿಲಿಸದ ಕಾರಣ ನಡುವೆ ಸಹಮತ ಮೂಡಲಿಲ್ಲ.

ADVERTISEMENT

ಸಭೆ ಬಳಿಕ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆಗಿಳಿದರೆ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು.ಸೀಟು ಹಂಚಿಕೆ ಬಗ್ಗೆ ಹಿಂದೆಯೂ ಒಂದು‌ ಸಭೆ ಆಗಿದೆ. ನಾವು ಮುಖ್ಯವಾಗಿ ಈ ಚುನಾವಣೆಯಲ್ಲಿ ಗೆಲ್ಲಬೇಕು. ವೇಣುಗೋಪಾಲ್, ಕುಮಾರಸ್ವಾಮಿ, ಡ್ಯಾನಿಶ್ ಅಲಿ ಎಲ್ಲ ವಿಷಯ ಚರ್ಚೆ ಮಾಡಿದ್ದೇವೆ. ಸರಿಯಾದ ದಿಕ್ಕಿನಲ್ಲಿಯೇ ಚರ್ಚೆ ಸಾಗಿದೆ ಎಂದರು.

ಸುದೀರ್ಘವಾಗಿ ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಜೆಡಿಎಸ್ ಕೇಳಿದ 12 ಕ್ಷೇತ್ರಗಳ ಬಗ್ಗೆಯೂ ದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಇತರ ಕ್ಷೇತ್ರಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಆದರೆ ಇನ್ನೂ ಅಂತಿಮ ರೂಪ ಕೊಟ್ಟಿಲ್ಲ ಎಂದು ತಿಳಿಸಿದರು.

ಸಮನ್ವಯ ಸಮಿತಿ ಸಂಚಾಲಕ ಡ್ಯಾನಿಶ್ ಆಲಿ ಮಾತನಾಡಿ, ಎರಡೂ ಪಕ್ಷಗಳು ಸೀಟ್ ಹಂಚಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕಳೆದ ವಾರ ರೇವಣ್ಣ ಮತ್ತು ವಿಶ್ವನಾಥ್ ಜತೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದರು. ಸಭೆಯಲ್ಲಿ ನಡೆದ ವಿಚಾರಗಳನ್ನು ಇಂದು ಚರ್ಚೆ ಮಾಡಿದ್ದೇವೆ. ಇದಕ್ಕಿಂತ ಮುಂದಿನ ಹಂತವನ್ನು ನಾವು ಚರ್ಚೆ ಮಾಡಿದ್ದೇವೆ ಎಂದರು.

ಇನ್ನೂ ಸ್ವಲ್ಪ ಚರ್ಚೆ ಆಗೋ ಅವಶ್ಯಕತೆ ಇದೆ. ಜೆಡಿಎಸ್ ವರಿಷ್ಟ ದೇವೇಗೌಡ ಮತ್ತು ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಚರ್ಚೆಯನ್ನು ಮುಗಿಸಿ ಅಂತಿಮಗೊಳಿಸುತ್ತೇವೆ. ಹಲವು ಫಾರ್ಮುಲಾಗಳು ನಮ್ಮ ಮುಂದಿವೆ. ಬಿಜೆಪಿಯನ್ನು ಶಕ್ತಿಗುಂದಿಸುವುದಕ್ಕೆ ನಮ್ಮ ಬಳಿ ಸಾಕಷ್ಟು ಫಾರ್ಮುಲಾ ಇದೆ ಎಂದರು.

ಜಾ‌ಧವ್ ವಿರುದ್ಧ ಸ್ಪೀಕರ್‌ಗೆ ದೂರು ಕೊಟ್ಟಿದ್ದೇವೆ

ಶಾಸಕ ಉಮೇಶ್ ಜಾಧವ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಉಮೇಶ್‌ ಜಾಧವ್ ಮೇಲೆ ನಾನು ಈಗಾಗಲೇ ಸ್ಪೀಕರ್‌ಗೆ ದೂರು ಕೊಟ್ಟಿದ್ದೇನೆ. ಪೂರಕ ದಾಖಲೆಗಳನ್ನೆಲ್ಲ ಹಿಂದೆಯೇ ಕೊಟ್ಟಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.