ADVERTISEMENT

‘ಸೆಮಿಕಂಡಕ್ಟರ್ ವಲಯಕ್ಕೆ 200 ಎಕರೆ ಭೂಮಿ’–ಸಿ.ಎನ್.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 19:46 IST
Last Updated 4 ಡಿಸೆಂಬರ್ 2021, 19:46 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ‘ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯವನ್ನು ಉತ್ತೇಜಿಸಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 200 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ’ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಭಾರತೀಯ ಎಲೆಕ್ಟ್ರಾನಿಕ್ ಉದ್ಯಮಗಳ ಒಕ್ಕೂಟ ಶನಿವಾರ ಏರ್ಪಡಿಸಿದ್ದ ‘ಸೆಮಿಕಂಡಕ್ಟರ್ ವಲಯದಲ್ಲಿ ಭಾರತಕ್ಕಿರುವ ಅವಕಾಶಗಳು’ ವಿಷಯದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಈ ಕ್ಷೇತ್ರದ ಹೂಡಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ₹ 2 ಸಾವಿರ ಕೋಟಿ ಸಬ್ಸಿಡಿ ಕೊಡಲಾಗುತ್ತಿದೆ, ಸೆಮಿಕಂಡಕ್ಟರ್ ವಲಯದ ಕಂಪನಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಕುರಿತು ಕೇಂದ್ರ ಸರ್ಕಾರದೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ’ ಎಂದರು.

‘ಸೆಮಿಕಂಡಕ್ಟರ್ ಮತ್ತು ಚಿಪ್ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಕೇಂದ್ರ ಸರ್ಕಾರ ಕೂಡ ಸಾಧನೆಯನ್ನು ಆಧರಿಸಿ ಪ್ರೋತ್ಸಾಹಕ ರಿಯಾಯಿತಿಗಳನ್ನು ಕೊಡುತ್ತಿದೆ. ರಾಜ್ಯವು ಸಬ್ಸಿಡಿ ಮೂಲಕ ಇದನ್ನು ವಿಸ್ತರಿಸಿದೆ. ಈಗಿರುವ ಸಬ್ಸಿಡಿ ಪ್ರಮಾಣ ಕೂಡ ಹೆಚ್ಚಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ADVERTISEMENT

‘ಈ ವಲಯವನ್ನು ಸದೃಢವಾಗಿ ಬೆಳೆಸಲು ಈಗಾಗಲೇ ಮೈಸೂರಿನಲ್ಲಿ ಉತ್ಪನ್ನಗಳ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಅಗತ್ಯವೆನಿಸಿದರೆ ಇನ್ನೂ ಹಲವೆಡೆ ಇಂಥ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ವಲಯಕ್ಕೇ ಸೀಮಿತವಾದ ಉತ್ಕೃಷ್ಟತಾ ಕೇಂದ್ರಗಳನ್ನು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಕೂಡ ಸ್ಥಾಪಿಸುವ ಚಿಂತನೆಯಿದೆ. ‘ಈ ವಲಯದ ಹತ್ತಾರು ಕಂಪನಿಗಳು ರಾಜ್ಯದಲ್ಲಿ ನೆಲೆಯೂರಲು ಆಸಕ್ತಿ ತೋರಿಸಿವೆ. ರಾಜ್ಯದಲ್ಲಿರುವ ಕೌಶಲ ಪೂರ್ಣ ಮಾನವ ಸಂಪನ್ಮೂಲವನ್ನು ಈ ವಲಯಕ್ಕೆ ಒದಗಿಸಲಾಗುವುದು' ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.