ADVERTISEMENT

ಕಪ್ಪು ಹಣ ಬಿಳಿ ಮಾಡಲು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ: ಎಸ್.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 6:14 IST
Last Updated 16 ಜುಲೈ 2020, 6:14 IST
ಎಸ್.ಆರ್.ಪಾಟೀಲ
ಎಸ್.ಆರ್.ಪಾಟೀಲ   

ಬಾಗಲಕೋಟೆ: ಬಿಜೆಪಿಯವರು ತಾವು ಬ್ರಹ್ಮಾಂಡ ಭ್ರಷ್ಟಾಚಾರದಿಂದ ಗಳಿಸಿದ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಕೃಷಿಕರಲ್ಲದವರು ಭೂಮಿ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, 'ಕೃಷಿಕರು ಹಾಗೂ ಕೃಷಿಭೂಮಿಯ ನಡುವೆ ತಾಯಿ-ಮಗುವಿನ ಕರುಳಿನ ಸಂಬಂಧವಿದೆ. ಈಗ ಅದನ್ನೇ ಬೇರ್ಪಡಿಸಲು ಹೊರಟಿದ್ದಾರೆ. ತಾಯಿಯನ್ನೇ ಮಾರಾಟ ಮಾಡಲು ಹೊರಟಿರುವ ಈ ಕಾರ್ಯ ನಾಡಿನ ನೆಲ-ಜಲದ ಪ್ರಶ್ನೆಯಾಗಿದೆ. ಈ ಕರಾಳ ಶಾಸನದ ವಿರುದ್ಧ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಒಂದಾಗಿ ಹೋರಾಟ ರೂಪಿಸಬೇಕಿದೆ. ಈ ಹೋರಾಟಕ್ಕೆ ನಾಡಿನ ಎಲ್ಲ ರೈತಾಪಿ ವರ್ಗ ಕೈಜೋಡಿಸಬೇಕು' ಎಂದು ಮನವಿ ಮಾಡಿದರು.

58 ಲಕ್ಷ ಮಂದಿ ನಿರ್ಗತಿಕರಾಗಲಿದ್ದಾರೆ:ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರಾಜ್ಯದಲ್ಲಿ 58 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತರು ಭೂಮಿ ಕಳೆದುಕೊಂಡು ನಿರ್ಗತಿಕರಾಗಲಿದ್ದಾರೆ. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೊರರಾಜ್ಯದವರು ಬಂದು ಭೂಮಿ ಖರೀದಿಸಲಿದ್ದಾರೆ. ನಗರ ಪ್ರದೇಶದ ಸುತ್ತಲಿನ ಹಳ್ಳಿಗಳ ಜಮೀನು ರಿಯಲ್ ಎಸ್ಟೇಟ್ ಮಾಫಿಯಾದ ಪಾಲಾಗಲಿದೆ ಎಂದು ಹೇಳಿದರು.

ADVERTISEMENT

ಸದನ ಸಮಿತಿ ರಚಿಸಿ: ಕೋವಿಡ್ ಚಿಕಿತ್ಸೆಗೆ ಔಷಧಿ ಉಪಕರಣ ಖರೀದಿ ಹಗರಣದ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನ ಸಮಿತಿ ರಚಿಸಲಿ. ಇಲ್ಲವೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ (ಪಿಎಸಿ) ತನಿಖೆ ಮುಂದುವರೆಸಲು ಅವಕಾಶ ನೀಡಲಿ. ಆ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದು, ಹೊರಗಿನ ಜನರು ರಾಜಧಾನಿಗೆ ಬಾರದಂತಾಗಿದೆ. ಹೀಗಾಗಿ ಸರ್ಕಾರದ ಕೆಲವು ಪ್ರಮುಖ ಇಲಾಖೆಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.