
ಬೆಂಗಳೂರು: ಸುಖದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ಮೂರು ತಿಂಗಳ ಹಿಂದೆ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿ, ಸಚಿವ ಸಂಪುಟದ ಮುಂದೆ ಸಲ್ಲಿಸಲು ಎರಡು ದಿನಗಳಲ್ಲಿ ಸಮಿತಿ ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ಸಲ್ಲಿಕೆಯಾದ ಮೂರು ತಿಂಗಳಲ್ಲಿ ಮೂವರು ಪ್ರಧಾನ ಕಾರ್ಯದರ್ಶಿಗಳು ಬದಲಾದ ಕಾರಣ ಸಮಿತಿ ರಚನೆ ವಿಳಂಬವಾಗಿತ್ತು. ವರದಿಯಲ್ಲಿನ ಎಲ್ಲ ವಿವರಗಳನ್ನು ಸಮಿತಿ ಕೂಲಂಕಷವಾಗಿ ಪರಿಶೀಲಿಸಿದ ನಂತರ ಅನುಷ್ಠಾನಕ್ಕಾಗಿ ಸಂಪಟದ ಅನುಮೋದನೆ ಪಡೆಯಲಾಗುವುದು ಎಂದರು.
ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿಯನ್ನು ಪರಿಶೀಲಿಸಲು ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಚಿಸಬೇಕಿತ್ತು. ಸಮಿತಿ ರಚನೆಯ ಕಡತಕ್ಕೆ ಸಹಿಹಾಕಿದ್ದರೂ ಪ್ರಧಾನ ಕಾರ್ಯದರ್ಶಿ ಖುಷ್ಬೂ ಗೋಯೆಲ್ ಚೌಧರಿ ಅವರ ಗಮನಕ್ಕೆ ಬಂದಿಲ್ಲ ಎಂದು ಸುದ್ದಿಗೋಷ್ಠಿಯಲ್ಲೇ ಆಶ್ಚರ್ಯ ವ್ಯಕ್ತಪಡಿಸಿದ ಅವರು, ತಕ್ಷಣ ಕ್ರಮಕೈಗೊಳ್ಳಲು ಸೂಚಿಸಿದರು.
‘ಆಯೋಗ ಮಧ್ಯಂತರ ವರದಿ ನೀಡಿದಾಗಲೇ ಸಾಕಷ್ಟು ಅಂಶಗಳನ್ನು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳದೆ ತರಾತುರಿಯಲ್ಲಿ ಎನ್‌ಇಪಿ ಜಾರಿಗೆ ತಂದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಸ್‌ಇಪಿ ಆಯೋಗ ರಚಿಸಿತ್ತು. 2025–26ನೇ ಸಾಲಿನಿಂದಲೇ ರಾಜ್ಯ ಶಿಕ್ಷಣ ನೀತಿ ಪಾಲಿಸಲಾಗಿದೆ. ಅಂತಿಮ ವರದಿ ಆಧರಿಸಿ, ಅಳವಡಿಸಿಕೊಳ್ಳಬೇಕಿರುವುದು ಕೆಲ ಅಂಶಗಳಷ್ಟೇ ಬಾಕಿ ಇದೆ. ಪರಿಶೀಲನೆಗೆ ಒಳಪಡಿಸಿ ಎರಡು ತಿಂಗಳಲ್ಲಿ ಸಂಪುಟದ ಮುಂದೆ ಇಡಲಾಗುವುದು. ನಂತರ ಸಾರ್ವಜನಿಕ ಚರ್ಚೆಗೆ ಬಿಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.