ADVERTISEMENT

ಉಳ್ಳಾಲ ಯುಜಿಡಿ ಅವ್ಯವಸ್ಥೆ ಬಗ್ಗೆ 23ಕ್ಕೆ ಸಭೆ: ಸಚಿವ ಬೈರತಿ ಬಸವರಾಜ್‌

ಅವೈಜ್ಞಾನಿಕ–ಅಸಮರ್ಪಕ ಕ್ರಿಯಾಯೋಜನೆ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 18:28 IST
Last Updated 16 ಸೆಪ್ಟೆಂಬರ್ 2021, 18:28 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ ಯೋಜನೆಯಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ಮತ್ತು ಪರಿಣಾಮಗಳ ಕುರಿತು ಇದೇ 23ಕ್ಕೆ ಸಭೆ ನಡೆಸಲು ರಾಜ್ಯ ಸರ್ಕಾರ ಸಮ್ಮತಿಸಿದೆ.

ಭವಿಷ್ಯದಲ್ಲಿ ಈ ಯೋಜನೆಯು ಸ್ಥಳೀಯರ ಬದುಕಿಗೆ ಕಂಟಕವಾಗುವ ಸಾಧ್ಯತೆ ಇದ್ದು, ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನಕ್ಕಾಗಿ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯರು ಗುರುವಾರ ಸದನದ ಬಾವಿಗಿಳಿದುಪ್ರತಿಭಟಿಸಿದರು.

ಜೆಡಿಎಸ್‌ನ ಬಿ.ಎಂ. ಫಾರೂಖ್, ‘ಉಳ್ಳಾಲದ ಕೋಡಿಯಲ್ಲಿ ₹65.71 ಕೋಟಿ ವೆಚ್ಚದಲ್ಲಿ ಎಂಟು ವಲಯಗಳಲ್ಲಿ ತಾಜ್ಯನೀರು ಶುದ್ಧೀಕರಣ ಘಟಕ ಹಾಗೂ ಗುಂಡಿಗಳನ್ನು ಒಳಗೊಂಡಂತೆ ಒಳಚರಂಡಿ ವ್ಯವಸ್ಥೆ ರೂಪಿಸುವ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಸಂಬಂಧ ರೂಪಿಸಿದ ಕ್ರಿಯಾಯೋಜನೆ ಅವೈಜ್ಞಾನಿಕ ಮತ್ತು ಅಸಮರ್ಪಕವಾಗಿದೆ’ ಎಂದರು.

ADVERTISEMENT

‘ಮಂಗಳೂರು ತೈಲ ಶುದ್ಧೀಕರಣ ಸ್ಥಾವರ (ಎಂಆರ್‌ಪಿಎಲ್) 4ನೇ ಹಂತ, ಭಾರತೀಯ ಯುದ್ಧತಂತ್ರ ಪೆಟ್ರೋಲಿಯಂ ಸಂಗ್ರಹಾಗಾರ (ಐಎಸ್‌ಪಿಆರ್‌ಎಲ್) ಸೇರಿದಂತೆ ಮತ್ತಿತರ ಯೋಜನೆಗಳಿಂದ ಮಂಗಳೂರು ‘ಹೈಡ್ರೊ ಕಾರ್ಬನ್ ಹಬ್’ ಆಗಿ ಪರಿವರ್ತನೆಯಾಗಿದೆ. ಇದರಿಂದ ಜನರ ಶ್ವಾಸಕೋಶಗಳು ದುರ್ಬಲಗೊಂಡಿದ್ದರಿಂದ ಈ ಭಾಗದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘ಸರ್ಕಾರದ ಈ ಯೋಜನೆಯಿಂದ ಉಳ್ಳಾಲವು ಮತ್ತೊಂದು ಸುರತ್ಕಲ್ ಆಗಲಿದೆ. ಯೋಜನೆಯ ಜಾರಿ ಸಂಬಂಧಿಸಿದಂತೆ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ಅಭಿಪ್ರಾಯ ಸಂಗ್ರಹಿಸಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆದಿಲ್ಲ’ ಎಂದು ದೂರಿದರು.

ಬಿಜೆಪಿಯ ಭಾರತಿ ಶೆಟ್ಟಿ, ‘ಅವೈಜ್ಞಾನಿಕ ಕಾಮಗಾರಿಯಿಂದ ಕರಾವಳಿ ಭಾಗದಲ್ಲಿ ಸಾಕಷ್ಟು ತೊಂದರೆಗಳಾಗುತ್ತಿವೆ. ಕೊಳಚೆ ನೀರು ರಸ್ತೆ ಮೇಲೆ ಮಾತ್ರವಲ್ಲದೆ, ಮನೆಯಲ್ಲಿನ ಶೌಚಗುಂಡಿಗಳಿಂದಲೂ ಮಲಿನ ನೀರು ಉಕ್ಕಿ ಬರುತ್ತಿದೆ. ಸ್ಥಳೀಯರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ‘ ಎಂದರು.

ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ಅರವಿಂದ ಕುಮಾರ್ ಅರಳಿ ಮತ್ತಿತರರು ದನಿಗೂಡಿಸಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ , ‘ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ, ನಿಯಮಗಳ ಪ್ರಕಾರ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈ ಸಂಬಂಧ ನಾನೇ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುತ್ತೇನೆ’ ಎಂದರು.

‘ಇದು ಸಣ್ಣ ವಿಷಯವಾಗಿರುವುದರಿಂದ ಜಂಟಿ ಸದನ ಸಮಿತಿ ರಚಿಸುವ ಅಗತ್ಯ ಬರುವುದಿಲ್ಲ’ ಎಂದು ಅವರು ಹೇಳುತ್ತಿದ್ದಂತೆ, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಯೋಜನೆಗೆ ಸಂಬಂಧಿಸಿದಂತೆಗುರುವಾರ (ಸೆ.23) ಕರಾವಳಿ ಭಾಗದ ಶಾಸಕರು, ಉನ್ನತಾಧಿಕಾರಿಗಳು, ತಜ್ಞರ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ನಂತರ ಧರಣಿ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.