ADVERTISEMENT

ಸೌರವಿದ್ಯುತ್ ಉತ್ಪಾದನೆಗೆ ಹಿನ್ನಡೆ

ಸೌರಚಾವಣಿ ಅಳವಡಿಕೆಯಲ್ಲಿ ಮೂರನೇ ವ್ಯಕ್ತಿ ಬಂಡವಾಳ ಹೂಡುವಂತಿಲ್ಲ: ಆತಂಕ ಸೃಷ್ಟಿಸಿದ ಕೆಇಆರ್‌ಸಿ ಆದೇಶ

ಗುರು ಪಿ.ಎಸ್‌
Published 11 ಡಿಸೆಂಬರ್ 2019, 19:37 IST
Last Updated 11 ಡಿಸೆಂಬರ್ 2019, 19:37 IST
   

ಬೆಂಗಳೂರು: ಸೌರಚಾವಣಿ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಪರಿಷ್ಕರಿಸಿದ್ದು, ವಾಣಿಜ್ಯ ಉದ್ದೇಶಕ್ಕೆ ಸೌರವಿದ್ಯುತ್‌ ಘಟಕಗಳ ಮೇಲೆ ಬಂಡವಾಳ ಹೂಡುವ ಅವಕಾಶವನ್ನು ತೆಗೆದು ಹಾಕಿದೆ. ಈ ಬದಲಾವಣೆಯಿಂದ, ಸೌರವಿದ್ಯುತ್‌ ಉತ್ಪಾದನಾ ವಲಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಬಂಡವಾಳ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಉದಾಹರಣೆಗೆ, ಆಯಾ ಕಟ್ಟಡ ಅಥವಾ ಕಾರ್ಖಾನೆಯ ಮಾಲೀಕ ಬೆಸ್ಕಾಂನಿಂದ ವಿದ್ಯುತ್‌ ಪಡೆದರೆ ಯುನಿಟ್‌ಗೆ ₹7.50 ಪಾವತಿಸಬೇಕಾಗುತ್ತಿತ್ತು. ಅದೇ ವ್ಯಕ್ತಿ ತನ್ನ ಕಟ್ಟಡದ ಮೇಲೆ ಸೌರಚಾವಣಿ ಅಳವಡಿಕೆಗೆ ಮೂರನೇ ವ್ಯಕ್ತಿಗೆ ಅವಕಾಶ ನೀಡಿದರೆ, ಆ ಘಟಕದಿಂದ ಉತ್ಪಾದಿಸಲಾಗುತ್ತಿದ್ದ ವಿದ್ಯುತ್‌ ಅನ್ನು, ಯುನಿಟ್‌ಗೆ ₹5ರಂತೆ ಹೂಡಿಕೆದಾರ ಮಾಲೀಕನಿಗೆ ಮಾರುತ್ತಿದ್ದ. ಇದರಿಂದ ಕಟ್ಟಡದ ಮಾಲೀಕನಿಗೂ ಯುನಿಟ್‌ಗೆ ₹2 ಉಳಿತಾಯವಾದರೆ, ಬಂಡವಾಳ ಹೂಡುವವರಿಗೆ ಇದೊಂದು
ಉದ್ಯಮವಾಗಿತ್ತು.

ಹೊಸ ಮಾರ್ಗದರ್ಶಿ ಸೂತ್ರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ಬಳಕೆಯಲ್ಲಿ ಯುನಿಟ್‌ಗೆ ₹3.07 ಮಾತ್ರ ನಿಗದಿ ಪಡಿಸಲಾಗಿದೆ.

ADVERTISEMENT

‘ಒಂದು ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಸೌರಘಟಕವನ್ನು ನೆಲದಲ್ಲಿ ಅಳವಡಿಸಲು ₹3.5 ಕೋಟಿ ಬೇಕಾಗುತ್ತದೆ. ಇಷ್ಟೇ ಸಾಮರ್ಥ್ಯದ ಘಟಕವನ್ನು ಮನೆಯ ಮೇಲೆ ಅಳವಡಿಸಲು ₹4.5 ಕೋಟಿ ಬೇಕಾಗುತ್ತದೆ. ಈಗ ₹3.07 ದರ ನಿಗದಿಪಡಿಸಿರುವುದರಿಂದ ಹೂಡಿಕೆದಾರರಿಗೂ ಲಾಭವಿಲ್ಲ, ಕಟ್ಟಡದ ಮಾಲೀಕರಿಗೂ ಲಾಭವಿಲ್ಲ’ ಎನ್ನುತ್ತಾರೆ ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್‌ ಶಿವಣ್ಣ.

ರಾಜ್ಯ ಸರ್ಕಾರದ ಸೌರ ನೀತಿ 2014–21ರ ಪ್ರಕಾರ, ಮಾರ್ಚ್‌ 2021ರ ವೇಳೆಗೆ ಸೌರಚಾವಣಿಗಳಿಂದ 2,400 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಗುರಿ ನಿಗದಿ ಪಡಿಸಲಾಗಿದೆ. ಆದರೆ, 2019ರ ಜುಲೈವರೆಗೂ ಉತ್ಪಾದನೆಯಾಗಿರುವುದು 205 ಮೆಗಾವಾಟ್‌ ಮಾತ್ರ. ಇಂತಹ ಸಂದರ್ಭದಲ್ಲಿ ಸೌರವಿದ್ಯುತ್‌ ಉತ್ಪಾದನೆಗೆ ಉತ್ತೇಜಕ ಕ್ರಮ ಕೈಗೊಳ್ಳುವ ಬದಲು, ನಿರ್ಬಂಧ ವಿಧಿಸಿದರೆ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಹೂಡಿಕೆದಾರರು ಹೇಳುತ್ತಾರೆ.

ಮೊದಲು 25 ಕಿಲೊವಾಟ್‌ಗಿಂತ ಕಡಿಮೆ (ಎಲ್‌ಟಿ) ಹಾಗೂ ಇದಕ್ಕಿಂತ ಹೆಚ್ಚು (ಎಚ್‌ಟಿ) ಸಂಪರ್ಕಗಳಲ್ಲಿಯೂ ಮೂರನೇ ವ್ಯಕ್ತಿ ಬಂಡವಾಳ ಹೂಡಲು ಅವಕಾಶವಿತ್ತು. ಈಗ ಎಲ್‌ಟಿ ಸಂಪರ್ಕಗಳಲ್ಲಿ ಮಾತ್ರ, ಮೂರನೇ ವ್ಯಕ್ತಿ ಬಂಡವಾಳ ಹೂಡಲು ಅವಕಾಶ ಕಲ್ಪಿಸಲಾಗಿದೆ.

‘ಎಲ್‌ಟಿ ಸಂಪರ್ಕಗಳು ಗೃಹ ಬಳಕೆಗೆ ಸೀಮಿತವಾಗಿರುತ್ತವೆ. ಯುನಿಟ್‌ಗೆ ₹3.07ರಷ್ಟು ನಿಗದಿ ಮಾಡಿರುವುದರಿಂದ ಈ ಘಟಕಗಳಲ್ಲಿ ಬಂಡವಾಳ ಹೂಡಲು ಯಾರೂ ಮುಂದೆ ಬರುವುದಿಲ್ಲ’ ಎಂದು ಅವರು ಹೇಳುತ್ತಾರೆ.

‘ಈ ಮೊದಲು, ಹೂಡಿಕೆದಾರರು ಯಾವುದೇ ಗ್ರಾಹಕ ಅಥವಾ ಮನೆ ಮಾಲೀಕನನ್ನು ನೇರವಾಗಿ ಸಂಪರ್ಕಿಸಿ, ಸೌರಚಾವಣಿಗೆ ಅಳವಡಿಕೆ ಒಪ್ಪಂದವನ್ನು ಮಾಡಿಕೊಳ್ಳಬಹುದಾಗಿತ್ತು. ಹೊಸ ಮಾರ್ಗಸೂಚಿ ಪ್ರಕಾರ, ಸೌರ ಅಳವಡಿಕೆಗೆ ಬೆಸ್ಕಾಂ ಅನ್ನು ಸಂಪರ್ಕಿಸಬೇಕಾಗಿದೆ. ಅಂದರೆ, ಸೇವಾ ಉದ್ದೇಶದಿಂದ ಕಾರ್ಯನಿರ್ವಹಿಸಬೇಕಾದ ಬೆಸ್ಕಾಂ ಲಾಭ ಉದ್ದೇಶದ ಸಂಸ್ಥೆ ಯಾಗಿ ಪರಿವರ್ತನೆ ಹೊಂದಲು ಈ ಮಾರ್ಗಸೂಚಿ ಅನುವು ಮಾಡಿ ಕೊಡುತ್ತದೆ. ಇದರಲ್ಲಿ ಬೆಸ್ಕಾಂ ಲಾಬಿ ಕೆಲಸ ಮಾಡಿದೆ’ ಎಂದು ಹೇಳುತ್ತಾರೆ.

***

ಹೊಸ ಮಾರ್ಗಸೂಚಿಗಳು ತಿಳಿದಿವೆ. ನಾನು ಅಧಿಕಾರ ಸ್ವೀಕರಿಸಿ ಕೆಲವೇ ತಿಂಗಳು ಆಗಿರುವು ದರಿಂದ ಈ ಕುರಿತು ಬೆಸ್ಕಾಂ ಪ್ರಸ್ತಾವ ಸಲ್ಲಿಸಿದ್ದರ ಕುರಿತು ಮಾಹಿತಿ ಇಲ್ಲ
- ರಾಜೇಶ್‌ ಗೌಡ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.