ಬೆಂಗಳೂರು: ಎಲ್ಲ ಗುತ್ತಿಗೆದಾರರಿಗೂ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಗುತ್ತಿಗೆದಾರರ ಸಂಘ ಮಾಡಿರುವ ಆರೋಪ ನಿರಾಧಾರ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇಲಾಖೆಯ ಆಡಳಿತದಲ್ಲಿ ಯಾರದೂ ಹಸ್ತಕ್ಷೇಪ ಇಲ್ಲ. ಕೆರೆಗಳ ಆಧುನೀಕರಣದಲ್ಲಿ ₹10 ಲಕ್ಷದವರೆಗಿನ ಕಾಮಗಾರಿಗಳಿಗೆ, ಪಿಕ್‌ಅಪ್ ಅಣೆಕಟ್ಟೆಗಳ ಕಾಮಗಾರಿಗಳಿಗೆ ₹15 ಲಕ್ಷದವರೆಗೆ ಪೂರ್ಣ ಹಣ ಬಿಡುಗಡೆ ಮಾಡಲಾಗಿದೆ. ತಾರತಮ್ಯ, ಹಸ್ತಕ್ಷೇಪ ಇಲ್ಲದೇ ಸಣ್ಣ ಗುತ್ತಿಗೆದಾರರಿಗೂ ಹಣ ನೀಡಲಾಗಿದೆ. ಹೆಚ್ಚಿನ ಹಣ ಬಾಕಿ ಇರುವ ಗುತ್ತಿಗೆದಾರರನ್ನು ಆದ್ಯತೆಯ ಮೇಲೆ ಪರಿಗಣಿಸಲಾಗಿದೆ. ಎರಡು ವರ್ಷಗಳಲ್ಲಿ 1,566 ಗುತ್ತಿಗೆದಾರರ ಬಾಕಿ ಇತ್ಯರ್ಥ ಮಾಡಲಾಗಿದೆ ಎಂದರು.
ರಾಜ್ಯ ಗುತ್ತಿಗೆದಾರರ ಸಂಘ ಆಧಾರ ರಹಿತ ಆರೋಪ ಮಾಡಿದೆ. ಸಂಘದ ಮುಖಂಡರ ಜತೆ ಸಭೆ ನಡೆಸಿ, ಗೊಂದಲಗಳನ್ನು ಪರಿಹರಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಇಲ್ಲದಿದ್ದರೂ, ಅವೈಜ್ಞಾನಿಕವಾಗಿ ಅನುಮೋದನೆ ನೀಡಲಾಗಿದ್ದ ₹12,693 ಕೋಟಿ ಮೊತ್ತದ ಒಟ್ಟು 15,549 ಕಾಮಗಾರಿ ಮುಂದುವರಿಸಲಾಗಿದೆ. 2000 ಗುತ್ತಿಗೆದಾರರಲ್ಲಿ, 639 ಗುತ್ತಿಗೆದಾರರ ಸಂಪೂರ್ಣ ಹಣವನ್ನು ಬಿಡುಗೆಡೆ ಮಾಡಲಾಗಿದೆ. 1,361 ಗುತ್ತಿಗೆದಾರರಿಗೆ ಭಾಗಶಃ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.