ADVERTISEMENT

ಬಿಆರ್‌ಟಿ: ಮೂರು ದಿನಗಳ ರಾಜ್ಯ ಮಟ್ಟದ ಹಕ್ಕಿ ಹಬ್ಬಕ್ಕೆ ಮಂಗಳವಾರ ಚಾಲನೆ

ಹೊಸ ಪಕ್ಷಿಗಳ ನಿರೀಕ್ಷೆಯಲ್ಲಿ ವನ್ಯಪ್ರೇಮಿಗಳು

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 14:59 IST
Last Updated 4 ಜನವರಿ 2021, 14:59 IST
ಹಕ್ಕಿ ಹಬ್ಬ
ಹಕ್ಕಿ ಹಬ್ಬ   

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಂಗಳವಾರದಿಂದ (ಜ.5) ಮೂರು ದಿನಗಳ ಕಾಲ ರಾಜ್ಯಮಟ್ಟದ ಹಕ್ಕಿ ಹಬ್ಬ ನಡೆಯಲಿದ್ದು, ಅರಣ್ಯದಲ್ಲಿ ಹಕ್ಕಿಗಳ ಹೊಸ ಪ್ರಭೇದಗಳು ಪತ್ತೆಯಾಗಲಿವೆಯೇ ಎಂಬ ನಿರೀಕ್ಷೆಯಲ್ಲಿ ವನ್ಯಪ್ರೇಮಿಗಳಿದ್ದಾರೆ.

ಬಿಆರ್‌ಟಿ ಅರಣ್ಯದಲ್ಲಿ ಇದುವರೆಗೆ 282 ಪ್ರಭೇದದ ಹಕ್ಕಿಗಳನ್ನು ಗುರುತಿಸಲಾಗಿದೆ. 2012ರಲ್ಲಿ ಅರಣ್ಯ ಇಲಾಖೆ ಇಡೀ ಸಂರಕ್ಷಿತ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಪಕ್ಷಿಗಳ ಗಣತಿ ನಡೆಸಿತ್ತು.

ಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಅಲಿ ಅವರು 1939ರಲ್ಲಿ ಇಲ್ಲಿನ ಅರಣ್ಯದಲ್ಲಿ ಸುತ್ತಾಡಿ, 100ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಿದ್ದರು. 2012ರವರೆಗೂ ಈ ಪ್ರದೇಶದಲ್ಲಿ 274 ಪ್ರಬೇಧಗಳನ್ನು ಪತ್ತೆ ಮಾಡಲಾಗಿತ್ತು. 2012ರಲ್ಲಿ ನಡೆದಿದ್ದ ಸಮೀಕ್ಷೆಯ ಸಂದರ್ಭದಲ್ಲಿ ಎಂಟು ಹೊಸ ಪ್ರಭೇದಗಳನ್ನು ತಜ್ಞರು ಗುರುತಿಸಿದ್ದರು. ಇದರೊಂದಿಗೆ ಒಟ್ಟು ಪಕ್ಷಿಗಳ ಸಂಖ್ಯೆ 282ಕ್ಕೆ ಏರಿದೆ.

ADVERTISEMENT

ಅರಣ್ಯ ಇಲಾಖೆ ಹಾಗೂ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಆಯೋಜಿಸಿರುವ ಏಳನೇ ಹಕ್ಕಿ ಹಬ್ಬದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ 50 ಮಂದಿ ಪಕ್ಷಿ ಕುತೂಹಲಿಗಳು ಭಾಗವಹಿಸಲಿದ್ದು, ತಂಡ ತಂಡವಾಗಿ ಎರಡು ದಿನಗಳ ಕಾಲ ಬಿಆರ್‌ಟಿ ಅರಣ್ಯದಲ್ಲಿ ಸುತ್ತಾಡಿ, ಪಕ್ಷಿಗಳ ವೀಕ್ಷಣೆ ಮಾಡಲಿದ್ದಾರೆ. ಹೊಸ ಪ್ರಬೇಧಗಳು ಪತ್ತೆಯಾದರೆ ಅದನ್ನು ದಾಖಲೀಕರಣ ಮಾಡಲಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಹಕ್ಕಿ ಹಬ್ಬ ಇದು.

ಹಬ್ಬ ಉದ್ಘಾಟನೆಗೊಳ್ಳಲಿರುವ ಮಂಗಳವಾರ ಪಕ್ಷಿಗಳ ತಜ್ಞರು, ಬಿಆರ್‌ಟಿ ಅರಣ್ಯ ಹಾಗೂ ಇಲ್ಲಿರುವ ಪಕ್ಷಿ ಸಂಕುಲಗಳ ಬಗ್ಗೆ ‌ವಿವರಣೆ ನೀಡಲಿದ್ದಾರೆ. ಡಾ.ಸಮೀರಾ ಅಗ್ನಿಹೋತ್ರಿ, ಡಾ.ಸುಬ್ರಹ್ಮಣ್ಯ ಎಸ್‌. (ಇಬ್ಬರೂ 2012ರ ಹಕ್ಕಿ ಗಣತಿಯಲ್ಲಿ ಭಾಗಿಯಾಗಿದ್ದರು), ಡಾ.ಪ್ರಶಾಂತ್‌ ಎನ್‌.ಎಸ್‌., ಡಾ.ಸುಗಂಧಿ ಗಧಾದರ್‌, ಡಾ.ಆರ್‌.ಗಣೇಶನ್‌, ಡಾ.ನರಸಿಂಹನ್‌ ಅವರು ಉಪನ್ಯಾಸ ನೀಡಲಿದ್ದಾರೆ.

10 ಮಾರ್ಗಗಳು: ‘ಹಬ್ಬದಲ್ಲಿ ಭಾಗವಹಿಸಲು 50 ಮಂದಿ ನೋಂದಣಿ ಮಾಡಿಕೊಂಡಿದ್ದು, ಎರಡು ದಿನಗಳ ಕಾಲ ಅರಣ್ಯದ ವಿವಿಧ ಭಾಗಗಳಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ತಲಾ ಐವರ 10 ತಂಡಗಳನ್ನು ಮಾಡಲಾಗಿದ್ದು, ವೀಕ್ಷಣೆಗಾಗಿ 10 ಮಾರ್ಗಗಳನ್ನು ಗುರುತಿಸಲಾಗಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್‌ ಕುಮಾರ್ ಹೇಳಿದರು.

‘ಪ್ರತಿ ತಂಡದೊಂದಿಗೆ ಸುರಕ್ಷತೆಗಾಗಿ ಇಬ್ಬರು ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ. ಬೆಳಿಗ್ಗೆ ತಿಂಡಿಯನ್ನು ಕಟ್ಟಿಕೊಂಡು ಹೊರಡುವ ತಂಡ ಮಧ್ಯಾಹ್ನದವರೆಗೂ ಅರಣ್ಯದಲ್ಲಿ ಸುತ್ತಾಡಿ ವೀಕ್ಷಣೆ ಮಾಡಿದ ಪಕ್ಷಿಗಳ ವಿವರಗಳನ್ನು ದಾಖಲು ಮಾಡಿಕೊಳ್ಳಲಿದ್ದಾರೆ. ನಂತರ ತಜ್ಞರು ಹಕ್ಕಿಗಳ ವಿವರಗಳನ್ನು ಪರಿಶೀಲಿಸಲಿದ್ದಾರೆ’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.