ADVERTISEMENT

ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ ಮರಣ ದಂಡನೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 21:24 IST
Last Updated 18 ನವೆಂಬರ್ 2022, 21:24 IST
   

ಬೆಂಗಳೂರು: ಒಂದು ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಅಪರಾಧಿ ಯಶವಂತಪುರದ ನಿವಾಸಿ ಮೂರ್ತಿ ಅಲಿಯಾಸ್‌ ಹಲ್ಲುಜ್ಜನಿಗೆ (25) ಇಲ್ಲಿನ ತ್ವರಿತಗತಿಯ ವಿಶೇಷ ನ್ಯಾಯಾಲಯವು (ಎಫ್‌ಟಿಎಸ್‌ಸಿ) ಶುಕ್ರವಾರ ಮರಣ ದಂಡನೆ ವಿಧಿಸಿದೆ.

ಅಪರಾಧಿಗೆ ಕಲಂ 202 ಭಾರತೀಯ ದಂಡ ಸಂಹಿತೆ ಅಡಿ ಅಪರಾಧಕ್ಕೆ ಮರಣ ದಂಡನೆ, ಕಲಂ 377 ಅಡಿ ಅಪರಾಧಕ್ಕೆ ಮತ್ತು ಕಲಂ 5, 6 ಪೋಕ್ಸೊ ಕಾಯ್ದೆ ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ₹ 50 ಸಾವಿರ ದಂಡ ವಿಧಿಸಿ ನ್ಯಾಯಾಧೀಶೆ ಕೆ.ಎನ್‌.ರೂಪಾ ಅವರು ಆದೇಶಿಸಿದ್ದಾರೆ.

ನೊಂದ ಮೃತ ಬಾಲಕ ಕುಟುಂಬಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ (ಡಿಎಲ್‌ಎಸ್‌ಎ)₹ 5 ಲಕ್ಷ ಪರಿಹಾರ ನೀಡುವಂತೆಯೂ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಘಟನೆ ನಡೆದ ಮರು ದಿನವೇ ರಾಜಗೋಪಾಲನಗರ ಠಾಣೆಯ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದರು. ಆಗ ಅಪರಾಧಿಗೆ 18 ವರ್ಷವಾಗಿತ್ತು.

ಅಪರಾಧಿ ಮೂರ್ತಿ ಹಾಗೂ ಕೊಲೆಯಾದ ಮಗುವಿನ ತಂದೆಯ ಪರಿಚಯಸ್ಥ. 2015ರ ಸೆ.12ರಂದು ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಉಲ್ಲಾಸ್ ಚಿತ್ರಮಂದಿರದ ಬಳಿ ಮಗುವಿನ ತಂದೆಗೆ ಮೂರ್ತಿ ಸಿಕ್ಕಿದ್ದ. ಆತನನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಮಗುವಿಗೆ ತಿಂಡಿ ಕೊಡಿಸಲು ಮೂವರು ರಾಜಗೋಪಾಲ ನಗರದ ಮುಖ್ಯರಸ್ತೆಗೆ ತೆರಳಿದ್ದರು. ತಿಂಡಿ ತರುವವರೆಗೆ ಮಗುವನ್ನು ನೋಡಿಕೊಳ್ಳುವಂತೆ ಮೂರ್ತಿಗೆ ತಿಳಿಸಿದ್ದ ತಂದೆ, ರಸ್ತೆಯ ಪಕ್ಕದಲ್ಲೇ ನಿಲ್ಲಿಸಿದ್ದರು. ತಿಂಡಿ ತರುವಷ್ಟರಲ್ಲಿ ಮಗು ಹಾಗೂ ಅಪರಾಧಿ ಸ್ಥಳದಲ್ಲಿ ಇರಲಿಲ್ಲ.

‘ಆಟೊದಲ್ಲಿ ಗೊರಗುಂಟೆಪಾಳ್ಯದ ಏರ್‌ ಫೋರ್ಸ್‌ನ ಮುಖ್ಯ ಎಂಜಿನಿಯರ್‌ ಕಚೇರಿಯ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಬಾಯಿ ಮುಚ್ಚಿ ಸಂಭೋಗ ನಡೆಸಿದ್ದ. ಮಗು ಅಳಲು ಆರಂಭಿಸಿದ ಮೇಲೆ ಯಾರಾದರೂ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ ಎನ್ನುವ ಭಯದಿಂದ ಸ್ಥಳದಲ್ಲಿ ಬಿದ್ದಿದ್ದ ಕಾಗದಗಳನ್ನೆಲ್ಲ ಗುಡ್ಡೆ ಹಾಕಿ ಬೆಂಕಿ ಹಚ್ಚಿದ್ದ. ಸಿಮೆಂಟ್‌ ಮೌಲ್ಡ್‌ ಅನ್ನು ಮಗುವಿನ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದ’ ಎಂದು ಸರ್ಕಾರಿ ವಕೀಲರಾದ ಪಿ.ಕೃಷ್ಣವೇಣಿ ತಿಳಿಸಿದ್ದಾರೆ. ರಾಜಗೋಪಾಲನಗರದ ಅಂದಿನ ಇನ್‌ಸ್ಪೆಕ್ಟರ್‌ ಮಹಾನಂದ್‌ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.