ADVERTISEMENT

ಪೋಕ್ಸೊ: ಶಿಕ್ಷಕನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 27 ಮೇ 2023, 15:46 IST
Last Updated 27 ಮೇ 2023, 15:46 IST
ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌   

ಬೆಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಿಕ್ಷಕರೊಬ್ಬರಿಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ಶಿಕ್ಷಕ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್‌ ಎಂ. ಅಡಿಗ ಅವರಿದ್ದ ಏಕಸದಸ್ಯ ನ್ಯಾಯಪೀಠ, ’ಅರ್ಜಿದಾರ ಶಿಕ್ಷಕ ನಾಲ್ಕು ಮತ್ತು ಐದನೇ ತರಗತಿಯ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ‘ ಎಂಬ ಆರೋಪಕ್ಕೆ ಆಘಾತ ವ್ಯಕ್ತಪಡಿಸಿದೆ.

‘ಶಿಕ್ಷಕರನ್ನು ದೇವರಿಗೆ ಸಮಾನ ಎಂದೇ ಪರಿಗಣಿಸುವ ಈ ದೇಶದಲ್ಲಿ ಆರೋಪಿಯು ತನ್ನ ಸ್ಥಾನಮಾನದ ಘನತೆ ಕುಂದಿಸುವ ಮೂಲಕ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಕಿರುಕುಳ ನೀಡಿರುವುದು ಕ್ರೂರ ನಡತೆಯೇ ಸರಿ. ಇಂತಹ ಘಟನೆಗಳಿಂದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಒಲ್ಲದ ಮನಸ್ಸಿನಿಂದ ಕಳುಹಿಸಬೇಕಾದ ಪರಿಸ್ಥಿತಿ ಬಂದೊದಗಿದೆ‘ ಎಂದು ಕಳವಳ ವ್ಯಕ್ತಪಡಿಸಿದೆ.

ADVERTISEMENT

ಪ್ರಕರಣವೇನು?: ಅರ್ಜಿದಾರ ಶಿಕ್ಷಕನ ನಡತೆಯ ವಿರುದ್ಧ ಈ ಸಾಲಿನ ಮಾರ್ಚ್‌ನಲ್ಲಿ ಕೆಲವು ಗ್ರಾಮಸ್ಥರು ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಯ (ಬಿಇಒ) ಗಮನ ಸೆಳೆದಿದ್ದರು. ಈ ಸಂಬಂಧ ಬಿಇಒ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಶಾಲೆಗೆ ಭೇಟಿ ಪರಿಶೀಲಿಸಿದ್ದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ಆರೋಪಿ ಶಿಕ್ಷಕನ ನಡತೆಯನ್ನು ಸವಿವರವಾಗಿ ಬಿಡಿಸಿಟ್ಟಿದ್ದರು.

ಮಕ್ಕಳ ಹೇಳಿಕೆಯನ್ನು ಆಧರಿಸಿ ಬಿಇಒ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಲಂ 8  (ಲೈಂಗಿಕ ದೌರ್ಜನ್ಯ) ಮತ್ತು 12ರ (ಲೈಂಗಿಕ ಕಿರುಕುಳ) ಅಡಿಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದರು. ತ್ವರಿತಗತಿ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.